
ಮಾಲೂರು, ಅ. ೧- ಸ್ವಚ್ಛತಾ ಹಿ ಸೇವಾ – ೨೦೨೬ರ ಅಂಗವಾಗಿ ಮಾಲೂರು ನಗರಸಭೆಯಿಂದ ನಗರದ ವಿವಿಧ ಪ್ರದೇಶಗಳಲ್ಲಿ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಗುರುವಾರ ನಗರದ ಮಾರಿಕಾಂಭ ದೇವಾಲಯದ ಬಳಿ ಇರುವ ಗಜಾಗುಂಡ್ಲ ಕಲ್ಯಾಣಿಯ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ನಗರಸಭೆಯ ಪೌರಾಯುಕ್ತ ಎಂ.ಎಸ್. ಮಹದೇವ್ ಹೇಳಿದರು.
ಸ್ವಚ್ಛತಾ ಹಿ ಸೇವಾ – ೨೦೨೬ರ ಅಂಗವಾಗಿ ಸೆ. ೧೭ ರಿಂದ ಅ. ೦೨ರವರೆಗೆ ನಗರದಲ್ಲಿನ ಕಲ್ಯಾಣಿಗಳು, ಸಾರ್ವಜನಿಕ ಸ್ಥಳಗಳು, ವಾಣಿಜ್ಯ ಸಂಕೀರ್ಣ, ಮಾರುಕಟ್ಟೆ ಮುಖ್ಯ ರಸ್ತೆಗಳು, ಶಾಲಾ ಕಾಲೇಜುಗಳ ಬಳಿ, ವಾರ್ಡ್‌ಗಳ ರಸ್ತಗಳಲ್ಲಿ ಸ್ವಚ್ಚತಾ ಕಾರ್ಯ ಕೈಗೊಳ್ಳಲು ಈಗಾಗಲೇ ಸ್ವಚ್ಛತೋತ್ಸವಕ್ಕೆ ಚಾಲನೆ ನೀಡಲಾಗಿದೆ. ನಗರದ ವಿವಿಧ ಭಾಗಗಳಲ್ಲಿ (ಕುಂಬಾರಪೇಟೆ ಶಾಲೆ ಪಕ್ಕ, ಫಾರೆಸ್ಟ್ ಆಫೀಸ್ ಹಿಂಭಾಗ, ಕೋರ್ಟ್ ಹಿಂಭಾಗ, ಹಳೇ ರಾಮೇಶ ಆಸ್ಪತ್ರೆ ಮುಂಭಾಗ, ಹೋಂಡಾ ಸ್ಟೇಡಿಯಂ ಪಕ್ಕ) ಗುರುತಿಸಲಾದ ಕಪ್ಪುಚುಕ್ಕೆ ಪ್ರದೇಶಗಳನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ನಗರ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಅವುಗಳನ್ನು ಸೌಂದರ್ಯೀಕರಣ ಸ್ಥಳಗಳಾಗಿ ಪರಿವರ್ತಿಸಲಾಯಿತು.
ಅಲ್ಲದೆ, ಸ್ವಚ್ಛತೆ ಮತ್ತು ಹಸಿರು ಪರಿಸರದ ಮಹತ್ವವನ್ನು ಉತ್ತೇಜಿಸುವ ಸಲುವಾಗಿ ಆಯ್ದ ಸ್ಥಳಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು, ಹಸಿರುಕರಣ ಕಾರ್ಯವನ್ನು ಕೈಗೊಳ್ಳಲಾಯಿತು. ಸ್ಥಳೀಯವಾಗಿ ಕಸ ಹಾಕುವುದನ್ನು ತಡೆಯುವ ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಥಳಗಳನ್ನು ಸ್ವಚ್ಛವಾಗಿ ಮತ್ತು ಆಕರ್ಷಕವಾಗಿ ರೂಪಿಸಲಾಯಿತು.
ಈ ಚಟುವಟಿಕೆಗಳ ಮೂಲಕ ಸ್ವಚ್ಛ ನಗರ – ಹಸಿರು ನಗರ ಎಂಬ ಪರಿಕಲ್ಪನೆಯನ್ನು ಉತ್ತೇಜಿಸು ವುದರೊಂದಿಗೆ, ಸಾರ್ವಜನಿಕರ ಸಹಭಾಗಿತ್ವದ ಮೂಲಕ ನಗರದ ಸ್ವಚ್ಛತೆ, ಸೌಂದರ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು.
ಸ್ವಚ್ಛತಾ ಹಿ ಸೇವಾ – ೨೦೨೬ರ ಅಂಗವಾಗಿ ಕೈಗೊಂಡ ಈ ಕಾರ್ಯಗಳು ಮಲೂರು ನಗರವನ್ನು ಸ್ವಚ್ಛ, ಸುಂದರ ಹಾಗೂ ಹಸಿರು ನಗರವನ್ನಾಗಿ ರೂಪಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿವೆ. ಗುರುವಾರ ಸ್ವಚ್ಛತಾ ಹಿ ಸೇವಾ ಅಂಗವಾಗಿ ನಗರದ ಹೃದಯಭಾಗದಲ್ಲಿರುವ ಗಜಾಗುಂಡ್ಲಾ ಕಲ್ಯಾಣಿಯ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಕುಂದುಮಡಿದ ಜನರು, ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.

























