Home ಜಿಲ್ಲೆ ಬೆಂಗಳೂರು ರಾಜ್ಯ ಸರ್ಕಾರದಿಂದ ರೈತರ ಸಮಸ್ಯೆಗಳಿಗೆ ಸ್ಪಂದನೆಯಿಲ್ಲ

ರಾಜ್ಯ ಸರ್ಕಾರದಿಂದ ರೈತರ ಸಮಸ್ಯೆಗಳಿಗೆ ಸ್ಪಂದನೆಯಿಲ್ಲ

ಕೋಲಾರ, ಅ. ೧: ಸರ್ಕಾರವು ಬರಪೀಡಿತ ಜಿಲ್ಲೆಯೆಂದು ಘೋಷಿಸಿದ್ದರೂ ಸಹ ಪರಿಹಾರ ಶೂನ್ಯವಾಗಿದೆ. ರೈತರ ಸಂಕಷ್ಟಗಳಿಗೆ ಸ್ಪಂದನೆಯಿಲ್ಲ. ಪ್ರತಿದಿನ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿ ಮೂಲಭೂತ ಸೌಲಭ್ಯಗಳಿಗೆ ಪರದಾಡುವಂತಾಗಿದೆ. “ಕಳೆದ ೪೫ ವರ್ಷಗಳ ನನ್ನ ರಾಜಕೀಯ ಇತಿಹಾಸದಲ್ಲಿ ಇಂಥಹ ಸರ್ಕಾರವನ್ನು ಕಂಡಿಲ್ಲ,” ಎಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ ಬೇಸರ ವ್ಯಕ್ತಪಡಿಸಿದರು.


ನಗರದ ರಾಷ್ಟ್ರೀಯ ಹೆದ್ದಾರಿ ಸೇವಾ ರಸ್ತೆಗೆ ಹೊಂದಿಕೊಂಡಂತೆ ಇರುವ ಜೆ.ಡಿ.ಎಸ್. ಪಕ್ಷದ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಅವರ ನಿವಾಸದ ಕಚೇರಿಯಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಈಗಾಗಲೇ ರಾಜ್ಯದಲ್ಲಿ ಜೆ.ಡಿ.ಎಸ್. ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ರಾಜ್ಯ ಪ್ರವಾಸ ಮಾಡುತ್ತಿದ್ದು, ಅ. ೨ರ ಶುಕ್ರವಾರ ನಿಖಿಲ್ ಕುಮಾರಸ್ವಾಮಿ ಅವರು ಬಂಗಾರಪೇಟೆ ಎ.ಪಿ.ಎಂ.ಸಿ. ಯಾರ್ಡ್‌ಗೆ ಬೆಳಿಗ್ಗೆ ೮ ಗಂಟೆಗೆ ಭೇಟಿ ನೀಡುತ್ತಿರುವುದು ರೈತರ ಸಮಸ್ಯೆಗಳನ್ನು ಅಲಿಸಲಿದೆ,” ಎಂದರು.


“ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಆಡಳಿತ ನಡೆಸಿದಾಗ ೨೫ ಸಾವಿರ ಕೋಟಿ ರೂ ಸಾಲ ಮನ್ನ ಮಾಡಿದ್ದರು,” ಎಂದ ಅವರು, “ರಾಜ್ಯದಲ್ಲಿ ಬರ ವೀಕ್ಷಣೆಗೆ ಕೇಂದ್ರ ಸರ್ಕಾರದಿಂದ ವಿಶೇಷ ತಂಡ ಅಗಮಿಸಲಿದೆ, ಬರ ಅಧ್ಯಾಯನ ನಡೆಸಿ ಕೇಂದ್ರಕ್ಕೆ ಬರದ ವರದಿಯನ್ನು ಸಲ್ಲಿಸಲಿದ್ದಾರೆ,” ಎಂದರು.


“ರಾಜ್ಯದಲ್ಲಿ ರೈತರು ಮಳೆ ಬೆಳೆಗಳಿಲ್ಲದೆ ತೀರ ಸಂಕಷ್ಟ ಪರಿಸ್ಥಿತಿಯಲ್ಲಿದ್ದು, ಅವರಿಗೆ ಧೈರ್ಯ ತುಂಬುವ ಕೆಲಸಕ್ಕಾಗಿ ಜೆ.ಡಿ.ಎಸ್.ನಿಂದ ರೈತರ ಸ್ವಾಭಿಮಾನಿ ಯಾತ್ರೆಯನ್ನು ನಡೆಸುತ್ತಿದ್ದೇವೆ,” ಎಂದರು. “ಜಿಲ್ಲೆಯಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ತೀವ್ರವಾಗಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಮಳೆಗಳಿಲ್ಲದೆ ಕೃಷಿ ಭಿತ್ತನೆಯನ್ನು ಮಾಡಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ, ಅವರಿಗೆ ರಾಜ್ಯ ಎಕರೆಗೆ ೨,೫ ಸಾವಿರ ನೀಡುವುದಾಗಿ ಹೇಳಿರುವುದು ನಾಚಿಕೆಗೇಡಾಗಿದೆ,” ಎಂದು ಟೀಕಿಸಿದರು.


“ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೆ.ಸಿ. ವ್ಯಾಲಿ ಹನೀನೀರು ಇಲ್ಲ, ಕೆರೆಗಳೆಲ್ಲಾ ಖಾಲಿಯಾಗಿ ವ್ಯರ್ಥವಾಗಿ ಪೈಪ್‌ಗಳ ಕಳಪೆ ಕಾಮಗಾರಿಗಳು ನಡೆಸಿ ಹೊಟ್ಟೆ ತುಂಬಿಸಿಕೊಂಡು ಹೋಗಿದ್ದಾರೆ. ಎತ್ತಿನ ಹೊಳೆ ನೀರು ೨೦೨೭ಕ್ಕೆ ತರುವುದಾಗಿ ಹೇಳುತ್ತಿದ್ದಾರೆ. ಈಗಾಗಲೇ ೨ ಸಾವಿರ ಕೋಟಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗಿದೆ. ರಾಜ್ಯದಲ್ಲಿ ಬರದಿಂದ ಮಳೆ ಬೀಳದೆ ಎತ್ತಿನ ಹೊಳೆ ತಂದರೂ ಪ್ರಯೋಜನವಾಗದು,” ಎಂದರು.


“ಶ್ರೀನಿವಾಸಪುರ ಕ್ಷೇತ್ರದಲ್ಲಿ ೫ ಸಾವಿರ ಎಕರೆ ಕೈಗಾರಿಕಾ ಪ್ರದೇಶವನ್ನು ಮಾಡಲು ಯಲ್ದೂರು ಹಾಗೂ ಮದನಪಲ್ಲಿ ಬಳಿ ತಲಾ ೨೫೦೦ ಎಕರೆ ಜಾಗವನ್ನು ಗುರುತಿಸಲಾಗಿದೆ. ಈಗಾಗಲೇ ಮಾಜಿ ಸಿ.ಎಂ. ಸಿದ್ದರಾಮಯ್ಯನವರು ಗುದ್ದಲಿ ಪೂಜೆ ಮಾಡಿದರೂ ಸಹ ಮುಂದುವರೆಸಲು ನಮ್ಮ ಕ್ಷೇತ್ರದ ಭಾಗೀರಥರು ಅವಕಾಶ ನೀಡುತ್ತಿಲ್ಲ. ರಾಜಕಾರಣವನ್ನು ಅಭಿವೃದ್ಧಿ ವಿಷಯಗಳಲ್ಲಿ ಮಾಡುವುದಲ್ಲ; ಚುನಾವಣೆಗಳಲ್ಲಿ ಮಾಡುವುದಾಗಿದೆ,” ಎಂದು ಪರೋಕ್ಷವಾಗಿ ಮಾಜಿ ಸ್ಪೀಕರ್ ವಿರುದ್ದ ವಾಗ್ದಾಳಿ ನಡೆಸಿದರು.


ಮಾಜಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ “ಮಂಗಳವಾರ ಕನಕಪುರದಲ್ಲಿ ರೈತರ ಸ್ವಾಭಿಮಾನಿ ಯಶಸ್ವಿಯಾಗಿ ನಡೆಸಲಾಗಿದೆ. ಅದೇ ರೀತಿ ಬಂಗಾರಪೇಟೆಯಲ್ಲಿ ಗುರುವಾರ ನಡೆಯಲಿರುವ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯವಾಗಿದೆ,” ಎಂದ ಅವರು, “ರಾಜ್ಯದಲ್ಲಿ ಬರ ಅಧ್ಯಾಯನಕ್ಕಾಗಿ ಕೇಂದ್ರದ ತಂಡವು ಶಿವರಾಜ್ ಚೌಹಣ್ ನೇತ್ರತ್ವದಲ್ಲಿ ಚಿತ್ರದುರ್ಗ ಸೇರಿದಂತೆ ವಿವಿಧಡೆ ಅಧ್ಯಯನ ನಡೆಸಿ ಕೇಂದ್ರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೂ ವರದಿ ನೀಡಲಿದ್ದಾರೆ,” ಎಂದರು.


“ರಾಜ್ಯ ಸರ್ಕಾರವು ರೈತರ ಸಂಕಷ್ಟಗಳಿಗೆ ಸ್ಪಂದಿಸದೆ ೧೦೦ ದಿನಗಳ ಅಬ್ಬರದ ಸಮಾರಂಭಗಳನ್ನು ಜಾಹೀರಾತುಗಳ ಮೂಲಕ ಪ್ರಚಾರದಲ್ಲಿದೆ ಹೊರತಾಗಿ ರೈತರ ಕಡೆ ಗಮನ ಹರಿಸುವಲ್ಲಿ ವಿಫಲವಾಗಿದೆ,” ಎಂದು ದೂರಿದರು. “ಅಧಿವೇಶನದಲ್ಲಿ ರೈತರ ಬರ ಸಮಸ್ಯೆಗಳಿಗೆ ಪರಿಹಾರದ ಚರ್ಚೆಗಳನ್ನು ಮಾಡದೆ ಸಾಂಕೀತವಾಗಿ ಮಾಡಿ ಮುಗಿಸಲಾಗಿದೆ. ಸಚಿವರುಗಳು ಜಿಲ್ಲೆಗಳಲ್ಲಿ ಕೆ.ಡಿ.ಪಿ. ಸಭೆಗಳನ್ನು ನಡೆಸುವಲ್ಲಿ ವಿಫಲರಾಗಿದ್ದಾರೆ. ದಿಶಾ ಸಮಿತಿಗಳ ಸಭೆಗಳು ನಡೆಸಿ ರಾಜ್ಯ ಮತ್ತು ಕೇಂದ್ರಕ್ಕೆ ವರದಿಗಳನ್ನು ನೀಡುವಲ್ಲಿ ವಿಫಲವಾಗಿದೆ,” ಎಂದು ಆರೋಪಿಸಿ “ಕೊಡಲೇ ಜಿಲ್ಲಾಮಾಣಿ ಕೇಂದ್ರ ಉಸ್ತುವಾರಿ ಸಚಿವರು ಕೆ.ಡಿ.ಪಿ. ಸಭೆಗಳನ್ನು ನಡೆಸುವಂತೆ ಆಗ್ರಹಿಸಿದರು.


“ಕೇಂದ್ರದ ತಂಡಕ್ಕೆ ಸಹಕಾರ ನೀಡುವ ದೆಸೆಯಲ್ಲಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಸಹಕಾರ ನೀಡಲಿದ್ದಾರೆ,” ಎಂದ ಅವರು, “ಈಗಾಗಲೇ ರಾಜ್ಯದ ಎನ್.ಡಿ.ಎ. ಸಭೆಯನ್ನು ನಡೆಸಿ ಮುಂಬರಲಿರುವ ವಿಧಾನ ಪರಿಷತ್ ಮತ್ತು ಪಂಚಾಯತ್ ಚುನಾವಣೆಗಳ ಬಗ್ಗೆ ಚರ್ಚಿಸಲಾಗಿದೆ,” ಎಂದರು.


ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, “ರಾಜ್ಯ ಸರ್ಕಾರವು ಜಿಲ್ಲೆಯ ೬ ಜಿಲ್ಲೆಗಳಿಗೆ ತಲಾ ೧೦೦ ಕೋಟಿ ೬೦೦ ಕೋಟಿ ರೂ ಬಿಡುಗಡೆ ಮಾಡಬೇಕು. ಪ್ರತಿ ರೈತರಿಗೆ ಕನಿಷ್ಟ ೨೫ ಸಾವಿರ ರೂ ಪರಿಹಾರ ನೀಡಬೇಕು. ಬ್ಯಾಂಕ್‌ಗಳಲ್ಲಿ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ರೈತರ ಸಾಲ ಬಡ್ಡಿ ಪಾವತಿಗೆ ಕನಿಷ್ಟ ೬ ತಿಂಗಳ ಕಾಲವಕಾಶ ನೀಡಬೇಕು. ತುರ್ತಾಗಿ ಮೇವು ಬ್ಯಾಂಕ್‌ಗಳನ್ನು ಹಾಗೂ ಗೋ ಶಾಲೆಗಳನ್ನು ಪ್ರತಿ ತಾಲ್ಲೂಕಿನಲ್ಲೂ ತೆರೆಬೇಕು. ರಿಯಲ್ ಎಸ್ಟೇಟ್ ದಂಧೆ ಬಿಟ್ಟು ರಾಜ್ಯ ಸರ್ಕಾರವು ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕಡೆ ಗಮನ ಹರಿಸಬೇಕಾಗಿದೆ,” ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ರೇಷ್ಮೆ, ಹೈನುಗಾರಿಕೆ ಹಾಗೂ ತೋಟಗಾರಿಕೆಗಳ ಮೇಲೆ ರೈತರು ಅವಲಂಬಿತರಾಗಿದ್ದಾರೆ. ಶೇ ೩೦ ರಷ್ಟು ಬಿತ್ತನೆಯಾಗಿದ್ದರೂ ಸಕಾಲಕ್ಕೆ ಮಳೆ ಬಾರದೆ ವಿಫಲವಾಗಿದೆ. “ರೈತರು ಗುಳೇ ಹೋಗಬೇಕೆ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂಬ ಆತಂಕ ವ್ಯಕ್ತಪಡಿಸಿದರು. “ನಿಖಿಲ್ ಮತ್ತು ಕುಮಾರಸ್ವಾಮಿ ಅವರು ರಾಜ್ಯ ಪ್ರವಾಸ ಮೂಲಕ ರೈತರಿಗೆ ಧೈರ್ಯ ತುಂಬುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ವರದಿ ಸಲ್ಲಿಸಿ ಪರಿಹಾರ ಬಿಡುಗಡೆಗೆ ಒತ್ತಾಯಿಸಲಿದ್ದಾರೆ,” ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಧ್ಯಕ್ಷ ಬಣಕನಹಳ್ಳಿ ನಟರಾಜ್ ಹಾಗೂ ತಾಲೂಕು ಅಧ್ಯಕ್ಷ ಬಾಬುಮೌನಿ ಉಪಸ್ಥಿತರಿದ್ದರು.