
ದುಬೈ, ಸೆ. 30: ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದಾಗ ವಿಮಾನ ಅಪಘಾತಕ್ಕೀಡಾಗದಂತೆ ತಡೆದ ಹೀರೋ ಪೈಲಟ್ ಭಾರತೀಯ ಮೂಲದವರು ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ದುಬೈನಿಂದ ಟೆಲ್ ಅವೀವ್ಗೆ ಹೊರಟಿದ್ದ ಫ್ಲೈದುಬೈ ಎಫ್ಝೆಡ್1073 ವಿಮಾನದಲ್ಲಿ ಸಹ-ಪೈಲಟ್ ಹಠಾತ್ತನೆ ದಾಳಿ ನಡೆಸಿ ನಾಯಕ ಪೈಲಟ್ಗೆ ಚಾಕುವಿನಿಂದ ಇರಿದಿದ್ದಾನೆ.
ಗಾಯಗೊಂಡರೂ ಭಾರತೀಯ ನಾಯಕ ಪೈಲಟ್ ಧೈರ್ಯದಿಂದ ಹೋರಾಡಿ, ಸಹ-ಪೈಲಟ್ನಿಂದ ವಿಮಾನದ ನಿಯಂತ್ರಣ ಕೈತಪ್ಪದಂತೆ ತಡೆದಿದ್ದಾರೆ.
ಬೋಯಿಂಗ್ 737 ವಿಮಾನದಲ್ಲಿದ್ದ ಸುಮಾರು 180 ಪ್ರಯಾಣಿಕರ ಜೀವವನ್ನು ಈ ಸಮಯಪ್ರಜ್ಞೆ ಕಾಪಾಡಿದೆ. ಆ ನಂತರ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಕುರಿತು ತನಿಖೆ ಮುಂದುವರಿದಿದೆ.





















