
ಬೆಂಗಳೂರು, ಸೆ.೩೦: ಬನಶಂಕರಿ ದೇವಸ್ಥಾನ ಮುಂಭಾಗದಲ್ಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸೇರಿದ ಸುಮಾರು ೧೦೦ ಕೋಟಿ ಮೌಲ್ಯದ ಸರ್ಕಾರಿ ಜಮೀನಿನಲ್ಲಿದ್ದ ಅಕ್ರಮ ಒತ್ತುವರಿಯನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ತೆರವುಗೊಳಿಸಿದೆ.
ಸಾರಕ್ಕಿ ಗ್ರಾಮದ ಸರ್ವೆ ನಂಬರ್ ೭೩ರಲ್ಲಿ ಇರುವ ೩ ಎಕರೆ ೧೩ ಗುಂಟೆ ಜಮೀನನ್ನು ಪಾಲಿಕೆ ಕೇಂದ್ರ ಕಚೇರಿ ನಿರ್ಮಾಣಕ್ಕಾಗಿ ಸರ್ಕಾರ ಮಂಜೂರು ಮಾಡಿದ್ದು, ಈ ಹಿನ್ನೆಲೆಯಲ್ಲಿ ಜಾಗವನ್ನು ಒತ್ತುವರಿದಾರರಿಂದ ಮುಕ್ತಗೊಳಿಸಿ ಪಾಲಿಕೆ ತನ್ನ ವಶಕ್ಕೆ ಪಡೆದುಕೊಂಡಿದೆ.
ಕೇಂದ್ರ ಕಚೇರಿ ನಿರ್ಮಾಣಕ್ಕೆ ಜಾಗ:
ಈ ಜಮೀನನ್ನು ಈ ಹಿಂದೆ ಸರ್ಕಾರವು ಕರ್ನಾಟಕ ಕೃಷಿ ಮಾರುಕಟ್ಟೆ ಇಲಾಖೆಯ ಹಣ್ಣು ಮತ್ತು ತರಕಾರಿ ವಿಭಾಗಕ್ಕೆ (ಎಪಿಎಂಸಿ) ಮಂಜೂರು ಮಾಡಿತ್ತು. ಆದರೆ ಮಂಜೂರಾತಿಯ ಉದ್ದೇಶಕ್ಕೆ ಜಮೀನು ಬಳಕೆಯಾಗದ ಹಿನ್ನೆಲೆಯಲ್ಲಿ ಸರ್ಕಾರ ಮಂಜೂರಾತಿಯನ್ನು ರದ್ದುಪಡಿಸಿದೆ.
ಬಳಿಕ ಸೆ.೩, ೨೦೨೬ರಂದು ಜಮೀನನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪಾಲಿಕೆಯ ಕೇಂದ್ರ ಕಚೇರಿ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ.
ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ
ಜಮೀನು ಮಂಜೂರಾದ ಬಳಿಕ ಇಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರ ನಿರ್ದೇಶನದಂತೆ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮಹಾಂತೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.
ಈ ವೇಳೆ ಪಾಲಿಕೆ ಜಾಗದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಶೆಡ್ಗಳು ಹಾಗೂ ಇತರ ಅಕ್ರಮ ಒತ್ತುವರಿಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲಾಯಿತು.
ಇದೇ ಸರ್ವೆ ನಂಬರ್ನ ಮತ್ತೊಂದು ಭಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಕೂಡ ಜಾಗವನ್ನು ತಕ್ಷಣ ಖಾಲಿ ಮಾಡುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಒತ್ತುವರಿ ಮಾಡಿದರೆ ಕಾನೂನು ಕ್ರಮ:
ಕಾರ್ಯಾಚರಣೆ ಬಳಿಕ ಸುಮಾರು ೧೦೦ ಕೋಟಿ ಮೌಲ್ಯದ ೩ ಎಕರೆ ೧೩ ಗುಂಟೆ ಜಮೀನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಶಕ್ಕೆ ಬಂದಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಜಿಬಿಎಗೆ ಸೇರಿದ ಈ ಜಮೀನಿನಲ್ಲಿ ಮತ್ತೆ ಒತ್ತುವರಿ ಅಥವಾ ಅಕ್ರಮ ನಿರ್ಮಾಣಕ್ಕೆ ಮುಂದಾದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.























