
ಬೆಂಗಳೂರು, ಸೆ.೩೦- ಹಾಲು ಉತ್ಪಾದಕರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದ್ದು,ಹಾಲಿನ ದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ.
ಹಾಲಿನ ಖರೀದಿ ದರ ಅಥವಾ ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈಗಾಗಲೇ ೧೬ ಹಾಲು ಒಕ್ಕೂಟಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಗಾಗಲೇ ಚರ್ಚೆ ನಡೆಸಿದ್ದಾರೆ.
ಕ್ಯಾಬಿನೆಟ್‌ನಲ್ಲಿ ಚರ್ಚಿಸಿದ ಬಳಿಕ ದರ ಏರಿಕೆ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು, ಹೀಗಾಗಿ ನಾಳಿನ ಸಚಿವ ಸಂಪುಟ ಸಭೆಯತ್ತ ಹಾಲು ಉತ್ಪಾದಕರು ಹಾಗೂ ಹೈನುಗಾರರ ಗಮನ ನೆಟ್ಟಿದೆ.
೧೦ ಏರಿಕೆಗೆ ಉತ್ಪಾದಕರ ಒತ್ತಾಯ:
ಪ್ರಸ್ತುತ ಹಾಲು ಉತ್ಪಾದಕರು ಪ್ರತಿ ಲೀಟರ್‌ಗೆ ೧೦ರಷ್ಟು ದರ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಉತ್ಪಾದಕರ ಬೇಡಿಕೆಯಂತೆ ಪೂರ್ಣ ೧೦ರಷ್ಟು ಏರಿಕೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಸರ್ಕಾರ, ಹಾಲು ಒಕ್ಕೂಟಗಳು ಹಾಗೂ ಗ್ರಾಹಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳದಂತೆ ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ, ಪ್ರತಿ ಲೀಟರ್‌ಗೆ ಸುಮಾರು ೩ರಿಂದ ೫ರಷ್ಟು ಹೆಚ್ಚಳ ಮಾಡುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
೧೦ರಷ್ಟು ಏರಿಕೆ ಮಾಡಿದರೆ ಸರ್ಕಾರದ ಮೇಲೆಯೂ ಹೆಚ್ಚಿನ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಮತ್ತೊಂದೆಡೆ, ಗ್ರಾಹಕರಿಂದ ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡಿದರೆ ಹಾಲಿನ ಬೆಲೆ ಏರಿಕೆಯಾಗಿ ಜನರ ಮೇಲೂ ಹೊರೆ ಬೀಳಲಿದೆ. ಹೀಗಾಗಿ ಉತ್ಪಾದಕರು, ಹಾಲು ಒಕ್ಕೂಟಗಳು, ಸರ್ಕಾರ ಮತ್ತು ಗ್ರಾಹಕರು ಎಲ್ಲರ ಹಿತವನ್ನು ಗಮನದಲ್ಲಿಟ್ಟುಕೊಂಡು ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.
ನಾಳಿನ ಸಚಿವ ಸಂಪುಟ ಸಭೆಯ ಬಳಿಕ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಹಾಲಿನ ದರ ಅಥವಾ ಪ್ರೋತ್ಸಾಹ ಧನ ಹೆಚ್ಚಳದ ಕುರಿತು ಸರ್ಕಾರ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ.























