Home Lead News ಸಿಇಸಿ ವಿರುದ್ಧ ಸುಪ್ರೀಂನಲ್ಲಿ ಅರ್ಜಿ

ಸಿಇಸಿ ವಿರುದ್ಧ ಸುಪ್ರೀಂನಲ್ಲಿ ಅರ್ಜಿ

ನವದೆಹಲಿ.ಸೆ.೨೫- ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮಕ್ಕೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ವಿಶೇಷ ತೀವ್ರ ಪರಿಷ್ಕರಣೆ ಸೇರಿದಂತೆ ಮತದಾರರ ಪಟ್ಟಿಗೆ ಸಂಬಂಧಿಸಿದ ಹಲವು ನಿರ್ಧಾರಗಳನ್ನು ಇತರ ಇಬ್ಬರು ಚುನಾವಣಾ ಆಯುಕ್ತರ ಸಮ್ಮತಿಯಿಲ್ಲದೆ ಏಕಪಕ್ಷೀಯವಾಗಿ ಕೈಗೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಇಸಿ ವಿರುದ್ಧ ಕಾನೂನು ಕ್ರಮ ಹಾಗೂ ಸ್ವತಂತ್ರ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ.

ಮತದಾರರ ನೋಂದಣಿಗೆ ಬಳಸುವ ಫಾರಂ೬ರಲ್ಲಿ ಮಾಡಲಾದ ಬದಲಾವಣೆ, ಚುನಾವಣಾ ಪಟ್ಟಿಯ ದತ್ತಾಂಶವನ್ನು ಕೇಂದ್ರೀಕರಿಸುವ ಕ್ರಮ ಹಾಗೂ ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳನ್ನು ಅರ್ಜಿಯಲ್ಲಿ ಪ್ರಮುಖವಾಗಿ ಪ್ರಶ್ನಿಸಲಾಗಿದೆ. ಈ ಕ್ರಮಗಳಿಂದ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಪರಿಸ್ಥಿತಿ ಉಂಟಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಅರ್ಜಿಯಲ್ಲಿ, ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ ೩೨ ಅಡಿಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಜೊತೆಗೆ, ಸಿಇಸಿ ಅವರ ಸಮ್ಮತಿಯೊಂದಿಗೆ ನಡೆದಿರುವುದಾಗಿ ಆರೋಪಿಸಲಾಗಿರುವ ನಿರ್ಧಾರಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಅವುಗಳನ್ನು ರದ್ದುಗೊಳಿಸುವಂತೆಯೂ ಮನವಿ ಮಾಡಲಾಗಿದೆ.

ಫಾರಂ೬ ಬದಲಾವಣೆ ವಿವಾದ

ಹೊಸ ಮತದಾರರ ನೋಂದಣಿಗಾಗಿ ಬಳಸುವ ಫಾರಂ೬ರಲ್ಲಿ ಈ ವರ್ಷ ಜುಲೈನಲ್ಲಿ ಹೊಸ ಪ್ರಶ್ನೆಯೊಂದನ್ನು ಸೇರಿಸಲಾಗಿತ್ತು. ಅರ್ಜಿದಾರರು ಅಥವಾ ಅವರ ಪೋಷಕರು/ಅಜ್ಜ-ಅಜ್ಜಿಯರ ಹೆಸರು ಹಿಂದಿನ SIಖ ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬ ಮಾಹಿತಿಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸದೆ ಅರ್ಜಿ ಮುಂದುವರಿಸಲು ಸಾಧ್ಯವಾಗದ ರೀತಿಯಲ್ಲಿ ವ್ಯವಸ್ಥೆ ರೂಪಿಸಲಾಗಿತ್ತು ಎಂದು ವರದಿಯಾಗಿದೆ.

ಈ ಬದಲಾವಣೆಗೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದರು. ನಿಯಮ ಬದಲಿಸದೆ ಫಾರಂ೬ರಲ್ಲಿ ಇಂತಹ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅವರು ಆಂತರಿಕವಾಗಿ ಪ್ರಶ್ನಿಸಿದ್ದರು. ಸಂಧು ಅವರು ಬಳಿಕ ಈ ಬದಲಾವಣೆಯನ್ನು ‘ಅಧಿಕೃತವಲ್ಲ’ ಮತ್ತು ‘ಕಾನೂನುಬಾಹಿರ’ ಎಂದು ಆಕ್ಷೇಪಿಸಿ ಅದನ್ನು ತಕ್ಷಣ ತೆಗೆದುಹಾಕಬೇಕು ಎಂದು ದಾಖಲಿಸಿದ್ದರು.

ಚುನಾವಣಾ ಆಯೋಗದ ಒಳಗಿನ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದಂತೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ ತನಿಖಾ ವರದಿಯ ಪ್ರಕಾರ, ಕಳೆದ ೧೦ ತಿಂಗಳಲ್ಲಿ ಚುನಾವಣಾ ಆಯುಕ್ತರಾದ ಸಂಧು ಮತ್ತು ಜೋಶಿ ಅವರು ಮತದಾರರ ಪಟ್ಟಿಗೆ ಸಂಬಂಧಿಸಿದ ನಿರ್ಧಾರಗಳು ಹಾಗೂ ಆದೇಶಗಳ ಕುರಿತು ಕನಿಷ್ಠ ೧೪ ಬಾರಿ ಲಿಖಿತ ಆಕ್ಷೇಪ ದಾಖಲಿಸಿದ್ದರು.

ಹೊಸ ಮತದಾರರ ಸೇರ್ಪಡೆ, ಮತದಾರರ ಹೆಸರು ಅಳಿಸುವುದು ಮತ್ತು ಮರುಸ್ಥಾಪಿಸುವುದು, ಫಾರಂ- ೬ ಬದಲಾವಣೆ ಹಾಗೂ ಚುನಾವಣಾ ಪಟ್ಟಿಯ ದತ್ತಾಂಶದ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

ಮತದಾರರ ಪಟ್ಟಿಯ ದತ್ತಾಂಶವನ್ನು ಕ್ರಮೇಣ ಕೇಂದ್ರೀಕರಿಸಲಾಗುತ್ತಿದೆ ಎಂಬುದರ ಬಗ್ಗೆಯೂ ಇಬ್ಬರು ಆಯುಕ್ತರು ಕಳವಳ ವ್ಯಕ್ತಪಡಿಸಿದ್ದರು. ರಾಜ್ಯ ಮಟ್ಟದ ಚುನಾವಣಾ ಅಧಿಕಾರಿಗಳಿಗೆ ಚುನಾವಣಾ ದತ್ತಾಂಶ ವ್ಯವಸ್ಥೆಗೆ ಸಂಪೂರ್ಣ ಪ್ರವೇಶ ಸಿಗುತ್ತಿಲ್ಲ ಎಂಬ ಪ್ರಶ್ನೆಯನ್ನೂ ಸಂಧು ಎತ್ತಿದ್ದರು. ಮತ್ತೊಂದೆಡೆ, ಜೋಶಿ ಅವರು ಮತದಾರರ ದತ್ತಾಂಶಕ್ಕೆ ಸಂಬಂಧಿಸಿದ ಪ್ರವೇಶ ಮತ್ತು ಬದಲಾವಣೆಗಳ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಸೂಚಿಸಿದ್ದರು.

೨೦೨೩ರ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕ, ಸೇವಾ ಷರತ್ತುಗಳು ಮತ್ತು ಅವಧಿ) ಕಾಯ್ದೆಯ ಸೆಕ್ಷನ್ ೧೮ ಪ್ರಕಾರ, ಚುನಾವಣಾ ಆಯೋಗದ ಕಾರ್ಯಗಳನ್ನು ಸಾಧ್ಯವಾದಷ್ಟು ಸರ್ವಾನುಮತದಿಂದ ನಡೆಸಬೇಕು. ಆಯುಕ್ತರ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಬಹುಮತದ ಅಭಿಪ್ರಾಯದಂತೆ ನಿರ್ಧಾರ ಕೈಗೊಳ್ಳಬೇಕು.

ಈ ಹಿನ್ನೆಲೆಯಲ್ಲಿ ಸಿಇಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂಬ ಆರೋಪಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಆದರೆ ಚುನಾವಣಾ ಆಯೋಗವು ಆಂತರಿಕ ಚರ್ಚೆಗಳಲ್ಲಿ ಭಿನ್ನಾಭಿಪ್ರಾಯಗಳು, ಲಿಖಿತ ಅಭಿಪ್ರಾಯಗಳು ಮತ್ತು ಆಕ್ಷೇಪಗಳು ಸಹಜವಾಗಿದ್ದು, ಅಂತಿಮ ನಿರ್ಧಾರಗಳನ್ನು ಆಯೋಗವು ಸರ್ವಾನುಮತದಿಂದಲೇ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದೆ.

ಬಿಹಾರದಲ್ಲಿ ೨೦೨೫ರ ಜೂನ್‌ನಲ್ಲಿ ಆರಂಭವಾದ ಪ್ರಕ್ರಿಯೆ ಬಳಿಕ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆದಿದೆ. ಈ ಪ್ರಕ್ರಿಯೆಯಲ್ಲಿ ಕೋಟ್ಯಂತರ ಹೆಸರುಗಳ ಕುರಿತು ಪರಿಶೀಲನೆ, ಸೇರ್ಪಡೆ, ಅಳಿಸುವಿಕೆ ಮತ್ತು ಮರುಸ್ಥಾಪನೆಗೆ ಸಂಬಂಧಿಸಿದ ವಿವಾದಗಳು ಉಂಟಾಗಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ರಾಜಕೀಯ ಪಕ್ಷಗಳಲ್ಲೂ ತೀವ್ರ ಚರ್ಚೆ ನಡೆಯುತ್ತಿದೆ.

*ಫಾರಂ೬ರಲ್ಲಿ ಮಾಡಿರುವ ಬದಲಾವಣೆ ಪ್ರಶ್ನಿಸಿ ಅರ್ಜಿ
*ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಆರೋಪ
*ಮತದಾರರ ಪಟ್ಟಿಯ ದತ್ತಾಂಶವನ್ನು ಕೇಂದ್ರೀಕರಿಸಿದ ಕ್ರಮದ ಬಗ್ಗೆಯೂ ಆಕ್ಷೇಪ
*ಎಸ್‌ಐಆರ್‌ನಿರ್ಧಾರಗಳಲ್ಲಿ ಇತರ ಆಯುಕ್ತರ ಸಮ್ಮತಿ ಇರಲಿಲ್ಲ ಎಂಬ ಆರೋಪ
*ಜನಪ್ರತಿನಿಧಿತ್ವ ಕಾಯ್ದೆಯ ಸೆಕ್ಷನ್ ೩೨ರಡಿ ಕ್ರಮಕ್ಕೆ ಮನವಿ
*ಆಯೋಗದ ಕಾರ್ಯವೈಖರಿ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿಕೆ
*ಚುನಾವಣಾ ಆಯೋಗದ ಸ್ಪಷ್ಟನೆಗೆ ಒತ್ತಾಯ

ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ರಾಜಕೀಯ ವಿವಾದ ತೀವ್ರ