Home Lead News ಕೈ ಶಾಸಕನ ರಾಜೀನಾಮೆ

ಕೈ ಶಾಸಕನ ರಾಜೀನಾಮೆ

ಬೆಂಗಳೂರು, ಸೆ. ೨೩- ಬರ ಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಇಂಡಿ ಮತ್ತು ಚಡಚಣ ತಾಲ್ಲೂಕು ಕೈ ಬಿಟ್ಟಿರುವುದಕ್ಕೆ ಬೇಸರಗೊಂಡು ಕಾಂಗ್ರೆಸ್‌ನ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ವಿಧಾನಸಭೆಯ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಅವರು ಇಂದು ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ್ ರವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.


ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಇಂಡಿ ಹಾಗೂ ಚಡಚಣ ತಾಲ್ಲೂಕು ಬರ ಘೋಷಣೆಯಾಗಿಲ್ಲ. ನಮ್ಮ ಮಾತಿಗೆ, ನಮ್ಮ ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.


ಈಗಿನ ರಾಜಕೀಯ ವಾತಾವರಣದಲ್ಲಿ ಬಲಾಢ್ಯರಿಗೆ, ಒತ್ತಡ ತಂತ್ರಗಳನ್ನು ಹೆಣೆಯುವವರಿಗೆ ಮನ್ನಣೆ ಇದೆ. ನಮ್ಮಂತಹ ಸೌಮ್ಯ ಸ್ವಭಾವದವರಿಗೆ ಯಾವುದೇ ಕೆಲಸಗಳಿಗೆ ಮನ್ನಣೆ ದೊರೆಯುತ್ತಿಲ್ಲ. ಆದ ಕಾರಣ ನನ್ನ ಕ್ಷೇತ್ರದ ಆಶಯ, ಆಶೋತ್ತರಗಳಿಗೆ ಸ್ಪಂದಿಸಲು ಸಾಧ್ಯವಾಗದ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.


ಶಾಸಕರಾದ ಯಶವಂತರಾಯಗೌಡ ಪಾಟೀಲ್ ಅವರು ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದು, ಅದು ಇನ್ನು ಅಂಗೀಕಾರವಾಗಿಲ್ಲ.

ರಾಜೀನಾಮೆ ಪತ್ರ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ


ಶಾಸಕ ಸ್ಥಾನಕ್ಕೆ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ನೀಡಿರುವ ವಿಚಾರದಲ್ಲಿ ವಿಧಾನಸಭೆಯಲ್ಲಿಂದು ಪ್ರಸ್ತಾಪವಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರವೇ ನಡೆದು ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ರೂಪುಗೊಂಡಿತು.


ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು, ವಿಧಾನಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ್ ರವರ ರಾಜೀನಾಮೆ ವಿಷಯವನ್ನು ಪ್ರಸ್ತಾಪಿಸಿ, ಅವರು ರಾಜೀನಾಮೆ ನೀಡಿರುವ ಪತ್ರದ ಪ್ರತಿಯನ್ನು ಪ್ರದರ್ಶಿಸಿ, ಕಾಂಗ್ರೆಸ್ ಪಕ್ಷದ ಶಾಸಕರೇ ರಾಜೀನಾಮೆ ಕೊಟ್ಟಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಬರ ನಿರ್ವಹಣೆಯಲ್ಲಿ ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದಾಗ, ವಿಪಕ್ಷ ಸದಸ್ಯರುಗಳೆಲ್ಲಾ ಶೇಮ್.. ಶೇಮ್.. ಎಂದು ಕೂಗಿದರು.


ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ದೊಡ್ಡಮಟ್ಟದ ಮಾತಿನ ಚಕಮಕಿ ನಡೆಯಿತು.


ಸಚಿವರಾದ ಯು.ಟಿ. ಖಾದರ್, ನರೇಂದ್ರ ಸ್ವಾಮಿ ಇವರುಗಳು ಎದ್ದುನಿಂತು ಇದು ನಮ್ಮ ಪಕ್ಷದ ವಿಚಾರ. ಅವರು ರಾಜೀನಾಮೆ ಕೊಟ್ಟಿದ್ದರೆ ನಮ್ಮ ಪಕ್ಷ ನೋಡಿಕೊಳ್ಳುತ್ತದೆ, ನಿಮಗೇಕೆ ಎಂದು ಹೇಳಿದರಾದರೂ ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ರಾಜೀನಾಮೆ ವಿಚಾರವನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದರು.


ಗದ್ದಲದ ನಡುವೆಯೇ ಮಾತನಾಡಿದ ಬಿಜೆಪಿಯ ಸುನೀಲ್‌ಕುಮಾರ್ ರವರು ಸದನ ನಡೆಯುತ್ತಿದೆ. ರಾಜೀನಾಮೆ ಬಗ್ಗೆ ಸಭಾಧ್ಯಕ್ಷರು ಸದನಕ್ಕೆ ಮಾಹಿತಿ ಕೊಡಬೇಕು ಎಂದು ಮನವಿ ಮಾಡಿದರು.


ಸದನ ನಡೆಯುವಾಗ ರಾಜೀನಾಮೆ ಕೊಟ್ಟಿರುವುದು ಸರ್ಕಾರಕ್ಕೆ ದೊಡ್ಡ ಅಪಮಾನ. ಇದಕ್ಕಿಂತ ದೊಡ್ಡ ಅಪಮಾನ ಇನ್ನೊಂದಿಲ್ಲ ಎಂದರು.


ಪ್ರತಿಪಕ್ಷಗಳ ಮಾತಿಗೆ ತಿರುಗೇಟು ನೀಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇದಕ್ಕೆಲ್ಲಾ ನಿಮ್ಮ ಕೇಂದ್ರ ಸರ್ಕಾರವೇ ಕಾರಣ ಎಂದು ಹೇಳಿದ್ದು ಮತ್ತೆ ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.


ನಂತರ ಮಾತು ಮುಂದುವರೆಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೇಂದ್ರ ಸರ್ಕಾರದ ಕೆಲವು ಮಾನದಂಡಗಳಿಂದ ಕೆಲವು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಆಗುತ್ತಿಲ್ಲ. ನಾವು ಪತ್ರ ಬರೆದಿದ್ದರೂ ಕೇಂದ್ರ ಸರ್ಕಾರ ನಿಯಮಾವಳಿಗಳಲ್ಲಿ ರಿಯಾಯ್ತಿ ನೀಡುತ್ತಿಲ್ಲ ಎಂದು ಹೇಳಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಈ ನಿಯಮಾವಳಿಗಳನ್ನು ಮಾಡಿದ್ದೇ ನಿಮ್ಮ ಯುಪಿಎ ಸರ್ಕಾರ ಎಂದರು.
ಈ ಹಂತದಲ್ಲಿ ಮತ್ತೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.


ಪ್ರತಿಪಕ್ಷ ನಾಯಕ ಆರ್. ಅಶೋಕ್ ಎದ್ದುನಿಂತು ಶಾಸಕರು ರಾಜೀನಾಮೆ ನೀಡಿದ್ದಾರೋ, ಇಲ್ಲವೋ ಅದನ್ನು ಹೇಳಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಒಂದು ಕಡೆ ಸರ್ಕಾರ ಪಾಪರ್ ಎಂದು ಹಣಕಾಸು ಇಲಾಖೆ ಹೇಳುತ್ತಿದೆ. ಇನ್ನೊಂದು ಕಡೆ ಬರ ನಿರ್ವಹಣೆ ಮಾಡುತ್ತಿಲ್ಲ ಎಂದು ಆರ್. ಅಶೋಕ್ ದೂರಿದರು.


ಈ ಹಂತದಲ್ಲಿ ಮತ್ತೆ ಸದನದಲ್ಲಿ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ವಾಕ್ಸಮರ ನಡೆದು ಗದ್ದಲದ ಪರಿಸ್ಥಿತಿ ರೂಪುಗೊಂಡಿತು.


ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರು, ಉಪಮುಖ್ಯಮಂತ್ರಿಗಳು ಮಾತನಾಡುತ್ತಿದ್ದಾರೆ. ಈ ರೀತಿ ಮಧ್ಯೆ ಮಧ್ಯೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರಾದರೂ ಸದಸ್ಯರುಗಳ ನಡುವೆ ಮಾತಿನ ಚಕಮಕಿ ಮುಂದುವರೆದೇ ಇತ್ತು.