
ನವದೆಹಲಿ, ಸೆ.೨೪: ತಮಿಳುನಾಡಿಗೆ ಪ್ರತಿನಿತ್ಯ ೧೫ ದಿನಗಳ ಕಾಲ ೪ ಸಾವಿರ ಕ್ಯುಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಸೂಚನೆ ನೀಡುವ ಮೂಲಕ ಕರ್ನಾಟಕಕ್ಕೆ ದೊಡ್ಡ ಆಘಾತ ನೀಡಿದೆ.
ಕಾವೇರಿ ನೀರು ಹಂಚಿಕೆ ಕುರಿತಂತೆ ದೆಹಲಿಯಲ್ಲಿಂದು ಮಹತ್ವದ ಸಿಡಬ್ಲ್ಯುಆರ್‌ಸಿ ಸಭೆ ನಡೆಯಿತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕಚೇರಿಯಲ್ಲಿ ನಡೆದ ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಿತು.
ಕರ್ನಾಟಕದಿಂದ ಕಾವೇರಿ ನಿಗಮದ ಎಂ.ಡಿ. ಮಹೇಶ್ ಹಾಗೂ ತಮಿಳುನಾಡಿನ ಜಲಸಂಪನ್ಮೂಲ ಅಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ವಾದ ಮಂಡಿಸಿತು.
ಮತ್ತೊಂದೆಡೆ ತನ್ನ ಪಾಲಿನ ನೀರು ಹರಿಸಬೇಕೆಂದು ತಮಿಳುನಾಡು ಅಧಿಕಾರಿಗಳು ಪಟ್ಟು ಹಿಡಿದರು. ಆದರೆ ನೀರು ಹರಿಸುವಂತೆ ಸಿಡಬ್ಲ್ಯು ಆರ್‌ಸಿ ಕರ್ನಾಟಕಕ್ಕೆ ಆದೇಶ ನೀಡಿತು.
ಸುಪ್ರೀಂನಲ್ಲಿ ವಿಚಾರಣೆ ಮುಂದೂಡಿಕೆ
ಈ ಮಧ್ಯೆ ತಮಿಳುನಾಡು ಕಾವೇರಿ ನೀರು ಹರಿಸುವಂತೆ ಕಾವೇರಿ ನದಿನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಶಿಫಾರಸ್ಸನ್ನು ಪ್ರಶ್ನಿಸಿ, ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಿತು.
ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠದ ಮುಂದೆ ನಡೆದ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಅ. ೧೨ಕ್ಕೆ ಮುಂದೂಡಿತು.
ಕರ್ನಾಟಕದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್, ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಸಿಡಬ್ಲ್ಯುಎಂಎ ನಿರ್ದೇಶನದಂತೆ ನೀರು ಬಿಡುಗಡೆ ಮಾಡುತ್ತಿದ್ದರೂ ರಾಜ್ಯಕ್ಕೆ ತೀವ್ರ ಸಂಕಷ್ಟ ಎದುರಾಗಿದೆ ಎಂದು ವಾದಿಸಿದರು.
ಕರ್ನಾಟಕದ ಪರ ವಾದ ಮಂಡಿಸಿದ ಶ್ಯಾಮ್ ದಿವಾನ್, ಜಲಾಶಯಗಳಲ್ಲಿನ ನೀರಿನ ಲಭ್ಯತೆ, ಮಳೆ ಕೊರತೆ ಹಾಗೂ ರಾಜ್ಯದ ಪರಿಸ್ಥಿತಿಯನ್ನು ಅWಒಂ ಪರಿಗಣಿಸಿದೆ. ಪ್ರಾಧಿಕಾರದ ನಿರ್ದೇಶನಗಳನ್ನು ಪಾಲಿಸುತ್ತಿದ್ದೇವೆ. ಸಂಕಷ್ಟದ ನಡುವೆಯೂ ಅಗತ್ಯ ಪ್ರಮಾಣದಲ್ಲಿ ನೀರು ಹರಿಸಲು ರಾಜ್ಯ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಮುಂಗಾರು ಹಿಂತಿರುಗುತ್ತಿರುವುದರಿಂದ ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ಮಳೆ ನಿರೀಕ್ಷೆ ಕಡಿಮೆ. ಮತ್ತೊಂದೆಡೆ ತಮಿಳುನಾಡಿಗೆ ಈಶಾನ್ಯ ಮುಂಗಾರಿನಿಂದ ಮಳೆಯ ಲಾಭ ದೊರೆಯುವ ಸಾಧ್ಯತೆಯಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
ತಮಿಳುನಾಡಿನ ೨೦ ಟಿಎಂಸಿ ಕೊರತೆ ವಾದ
ತಮಿಳುನಾಡಿನ ಪರ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್, ಕರ್ನಾಟಕದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ದೊರೆಯದ ಕಾರಣ ರಾಜ್ಯಕ್ಕೆ ಸುಮಾರು ೨೦ ಟಿಎಂಸಿ ನೀರಿನ ಕೊರತೆ ಉಂಟಾಗಿದೆ ಎಂದು ವಾದಿಸಿದರು. ಕರ್ನಾಟಕದ ಲೆಕ್ಕಾಚಾರದ ಪ್ರಕಾರ ಈ ಕೊರತೆ ಸುಮಾರು ೧೬ ಟಿಎಂಸಿ ಇದೆ ಎಂದು ಅವರು ತಿಳಿಸಿದರು.
ಸಿಡಬ್ಲ್ಯುಎಂಎ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ನಿರ್ದೇಶನ ನೀಡುತ್ತಿದ್ದರೂ, ಹಿಂದಿನ ಕೊರತೆಯನ್ನು ಹೇಗೆ ಸರಿದೂಗಿಸಬೇಕು ಎಂಬ ಬಗ್ಗೆ ಸೂಕ್ತ ಆದೇಶ ನೀಡಿಲ್ಲ ಎಂದು ತಮಿಳುನಾಡು ಆಕ್ಷೇಪಿಸಿತು.
ನೀರಿನ ಕೊರತೆಯಿಂದ ತಮಿಳುನಾಡಿನಲ್ಲಿ ಕುರುವೈ ಬೆಳೆ ಹಾನಿಯಾಗಿದೆ ಎಂದು ಆ ರಾಜ್ಯದ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಬಾಕಿ ನೀರನ್ನು ಬಿಡುಗಡೆ ಮಾಡದಿದ್ದರೆ ಮುಂದಿನ ಬೆಳೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವಾದಿಸಿದರು.
ಈ ಹಿಂದೆ ತಮಿಳುನಾಡು, ಜೂನ್ ೧ರಿಂದ ಸೆಪ್ಟೆಂಬರ್ ೯ರವರೆಗೆ ಕರ್ನಾಟಕದಿಂದ ಸುಮಾರು ೧೬ ಟಿಎಂಸಿ ನೀರಿನ ಕೊರತೆ ಉಂಟಾಗಿದೆ ಎಂದು ಆರೋಪಿಸಿ, ಆ ಕೊರತೆಯನ್ನು ಪ್ರಮಾಣಾನುಗುಣವಾಗಿ ಸರಿದೂಗಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಸೆಪ್ಟೆಂಬರ್ ೯ರಿಂದ ೨೩ರವರೆಗೆ ಬಿಳಿಗುಂಡ್ಲುವಿನಲ್ಲಿ ಪ್ರತಿದಿನ ೬,೦೦೦ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯುಎಂಎ ನೀಡಿದ್ದ ನಿರ್ದೇಶನ ಜಾರಿಗೊಳಿಸಬೇಕು ಎಂದೂ ಆಗ್ರಹಿಸಿತ್ತು.
ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವ ಕಾವೇರಿ ನೀರಿನ ಪ್ರಮಾಣವನ್ನು ಬಿಳಿಗುಂಡ್ಲು ಅಂತರರಾಜ್ಯ ಅಳತೆ ಕೇಂದ್ರದಲ್ಲಿ ದಾಖಲಿಸಲಾಗುತ್ತದೆ. ನೀರು ಬಿಡುಗಡೆಗೆ ಸಂಬಂಧಿಸಿದ ವಿವಾದದಲ್ಲಿ ಈ ಅಂಕಿ-ಅಂಶಗಳು ಪ್ರಮುಖವಾಗಿವೆ.
ಆಗಸ್ಟ್‌ನಲ್ಲಿ ಕರ್ನಾಟಕಕ್ಕೆ ಬಿಳಿಗುಂಡ್ಲುವಿನಲ್ಲಿ ೯,೦೦೦ ಕ್ಯೂಸೆಕ್ ನೀರು ಹರಿಸುವಂತೆ ನಿರ್ದೇಶಿಸಿತ್ತು. ಸೆಪ್ಟೆಂಬರ್ ೮ರಂದು ನಡೆದ ಸಭೆಯಲ್ಲಿ ಶಿಫಾರಸಿನ ಮೇರೆಗೆ ಮುಂದಿನ ೧೫ ದಿನಗಳ ಕಾಲ ೬,೦೦೦ ಕ್ಯೂಸೆಕ್ ಹರಿಸುವಂತೆ ಮತ್ತೆ ನಿರ್ದೇಶನ ನೀಡಲಾಗಿತ್ತು.
ಕರ್ನಾಟಕದ ವಾದದ ಪ್ರಕಾರ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ಜಲಾಶಯಗಳ ಮೇಲೆ ಒತ್ತಡವಿದೆ. ರಾಜ್ಯದ ಕುಡಿಯುವ ನೀರಿನ ಅಗತ್ಯ, ನೀರಾವರಿ ಹಾಗೂ ಮುಂದಿನ ಬೇಸಿಗೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೀರು ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಇದೆ.
ಮತ್ತೊಂದೆಡೆ, ತಮಿಳುನಾಡು ತನ್ನ ಪಾಲಿನ ನೀರು ಸಮಯಕ್ಕೆ ಸರಿಯಾಗಿ ದೊರೆಯದಿರುವುದರಿಂದ ಕೃಷಿ ಹಾಗೂ ಕುಡಿಯುವ ನೀರಿನ ಅಗತ್ಯಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಾದಿಸುತ್ತಿದೆ. ಹೀಗಾಗಿ ಎರಡೂ ರಾಜ್ಯಗಳ ನಡುವಿನ ನೀರು ಕೊರತೆ ಹಂಚಿಕೆ ಮತ್ತು ಹಿಂದಿನ ಬಾಕಿ ನೀರಿನ ಲೆಕ್ಕಾಚಾರ ಮುಂದಿನ ವಿಚಾರಣೆಯಲ್ಲೂ ಪ್ರಮುಖ ವಿಷಯವಾಗುವ ಸಾಧ್ಯತೆಯಿದೆ.
ಕಾವೇರಿ ನೀರು ಬಿಡುಗಡೆ ಪರಿಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದು, ಹವಾಮಾನ, ಜಲಾಶಯಗಳ ಸಂಗ್ರಹ, ಒಳಹರಿವು ಮತ್ತು ಎರಡೂ ರಾಜ್ಯಗಳ ನೀರಿನ ಅಗತ್ಯಗಳನ್ನು ಆಧರಿಸಿ ನಿರ್ದೇಶನಗಳನ್ನು ನೀಡುತ್ತಿವೆ. ಆಗಸ್ಟ್‌ನಲ್ಲಿಯೂ ಪ್ರಾಧಿಕಾರವು ಕರ್ನಾಟಕದ ನೀರು ಬಿಡುಗಡೆ ಕುರಿತು ಹಂತ ಹಂತವಾಗಿ ಆದೇಶಗಳನ್ನು ನೀಡಿತ್ತು.
ಎರಡೂ ರಾಜ್ಯಗಳ ವಾದ ಆಲಿಸಿದ ಬಳಿಕ ಸುಪ್ರೀಂ ಕೋರ್ಟ್ ಕರ್ನಾಟಕವು ತಮಿಳುನಾಡಿನ ಅರ್ಜಿಗೆ ತನ್ನ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಸಿಡಬ್ಲ್ಯುಎಂಎ ನಿರ್ದೇಶನಗಳ ಅನುಷ್ಠಾನ ಹಾಗೂ ನೀರಿನ ಕೊರತೆಯ ಕುರಿತ ಎರಡೂ ರಾಜ್ಯಗಳ ವಾದಗಳು ಮುಂದಿನ ವಿಚಾರಣೆಯಲ್ಲಿ ಪರಿಶೀಲನೆಗೆ ಬರಲಿವೆ.ಅಕ್ಟೋಬರ್ ೧೨ರಂದು ಪ್ರಕರಣ ಮತ್ತೆ ವಿಚಾರಣೆಗೆ ಬರಲಿದ್ದು, ಆ ವೇಳೆಗೆ ಕರ್ನಾಟಕದ ಅಫಿಡವಿಟ್ ಹಾಗೂ ನೀರು ಬಿಡುಗಡೆಗೆ ಸಂಬಂಧಿಸಿದ ಇತ್ತೀಚಿನ ಅಂಕಿ-ಅಂಶಗಳು ಮಹತ್ವ ಪಡೆಯಲಿವೆ.
೪ ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ
ಕಾವೇರಿ ನೀರು ಹಂಚಿಕೆ ವಿಚಾರವಾಗಿ ದೆಹಲಿಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಸಭೆ ನಡೆಸಲಾಯಿತು.ಕರ್ನಾಟಕದಿಂದ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಹಾಗೂ ತಮಿಳುನಾಡು ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪ್ರತಿನಿತ್ಯ ೪ ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ ಸಿಡಬ್ಲ್ಯೂಆರ್‌ಸಿ ಸೂಚನೆ ನೀಡಿದೆ.
ಮುಂದಿನ ವಿಚಾರಣೆ: ಅಕ್ಟೋಬರ್ ೧೨
ಕರ್ನಾಟಕದ ವಾದ: ರಾಜ್ಯದಲ್ಲಿ ಬರ ಪರಿಸ್ಥಿತಿ; : ಲ್ಙ್ಟ ಆದೇಶ ಪಾಲನೆ
ತಮಿಳುನಾಡಿನ ವಾದ: ನೀರು ಬಿಡುಗಡೆ ಕೊರತೆಯಿಂದ ಬೆಳೆ ಹಾನಿ
ತಮಿಳುನಾಡಿನ ಲೆಕ್ಕ: ಸುಮಾರು ೨೦ ಟಿಎಂಸಿ ಕೊರತೆ
ಕರ್ನಾಟಕದ ಲೆಕ್ಕ: ಸುಮಾರು ೧೬ ಟಿಎಂಸಿ ಕೊರತೆ ಎಂದು ತಮಿಳುನಾಡು ಉಲ್ಲೇಖಿಸಿದ ವಾದ
ಬಿಳಿಗುಂಡ್ಲುವಿನಲ್ಲಿ ೬,೦೦೦ ಕ್ಯೂಸೆಕ್ ನೀರು ಹರಿಸುವಂತೆ ಸೆಪ್ಟೆಂಬರ್‌ನಲ್ಲಿ ಸೂಚನೆ
























