Home ಜಿಲ್ಲೆ ನೀಲಿ ಶಾಲಿನ ಬಗ್ಗೆ ಹೇಳಿಕೆ ಖಂಡಿಸಿ: ಪ್ರತಾಪ್ ಸಿಂಹ ಕ್ಷಮೆಯಾಚಿಸಲಿ:ಶಂಕರ ಕಾಂಬಳೆ

ನೀಲಿ ಶಾಲಿನ ಬಗ್ಗೆ ಹೇಳಿಕೆ ಖಂಡಿಸಿ: ಪ್ರತಾಪ್ ಸಿಂಹ ಕ್ಷಮೆಯಾಚಿಸಲಿ:ಶಂಕರ ಕಾಂಬಳೆ

ಸಂಜೆ ವಾಣಿ ವಾರ್ತೆ |
ಜಮಖಂಡಿ: ತಾಲ್ಲೂಕಿನ ಕುಂಚನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಮಾರುತಿ ಕಾಂಬಳೆ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದಲಿತ ಸಂಘರ್ಷ ಸಮಿತಿ ಹಾಗೂ ದಲಿತರ ಪ್ರತೀಕವಾಗಿರುವ ನೀಲಿ ಶಾಲಿನ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸಿ, ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ದಲಿತ ಸಂಘಟನೆಗಳು ಯಾವುದೇ ಕಾರ್ಯಕ್ರಮ, ಹೋರಾಟ ಅಥವಾ ಪ್ರತಿಭಟನೆ ನಡೆಸಿದಾಗ ನೀಲಿ ಶಾಲು ಧರಿಸಿ ಬರುತ್ತಾರೆ ಎಂಬ ರೀತಿಯಲ್ಲಿ ಪ್ರತಾಪ್ ಸಿಂಹ ಅವರು ಮಾತನಾಡಿರುವುದು ದಲಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವಂತಿದೆ ಎಂದು ಹೇಳಿದರು.

ನೀಲಿ ಶಾಲು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷ ನೀಡಿರುವುದಲ್ಲ. ಅದು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ, ಸಮಾನತೆ, ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿ ದಲಿತ ಸಮುದಾಯದಲ್ಲಿ ಮಹತ್ವ ಪಡೆದಿದೆ. ಹೀಗಾಗಿ ನೀಲಿ ಶಾಲಿನ ಕುರಿತು ಮಾತನಾಡುವಾಗ ಅದರ ಐತಿಹಾಸಿಕ ಹಾಗೂ ಸಾಮಾಜಿಕ ಮಹತ್ವವನ್ನು ಅರಿತು ಮಾತನಾಡಬೇಕು ಎಂದು ಕಾಂಬಳೆ ಹೇಳಿದರು.

ದಲಿತ ಸಂಘರ್ಷ ಸಮಿತಿ ಸೇರಿದಂತೆ ದಲಿತ ಸಂಘಟನೆಗಳು ಹಲವು ವರ್ಷಗಳಿಂದ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿವೆ. ಈ ಸಂಘಟನೆಗಳ ಕುರಿತು ಹಾಗೂ ಅವುಗಳ ಸಂಕೇತಗಳ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡುವುದನ್ನು ದಲಿತ ಸಮುದಾಯ ಒಪ್ಪುವುದಿಲ್ಲ ಎಂದು ಅವರು ಹೇಳಿದರು.

ಪ್ರತಾಪ್ ಸಿಂಹ ಅವರು ತಮ್ಮ ಹೇಳಿಕೆಗಳನ್ನು ಹಿಂಪಡೆದು, ದಲಿತ ಸಮುದಾಯ ಹಾಗೂ ನೀಲಿ ಶಾಲಿನ ಕುರಿತು ನೀಡಿರುವ ಹೇಳಿಕೆಗಳಿಗೆ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಜಮಖಂಡಿ ತಾಲ್ಲೂಕಿನ ದಲಿತ ಸಂಘಟನೆಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ಷೇಪ ವ್ಯಕ್ತಪಡಿಸಲಿವೆ ಎಂದು ಶಂಕರ ಕಾಂಬಳೆ ಎಚ್ಚರಿಸಿದರು.
ದಲಿತ ಸಮುದಾಯದ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಹೇಳಿಕೆಗಳು ಮುಂದುವರಿಯಬಾರದು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ರೀತಿಯ ಮಾತುಗಳನ್ನು ಬಳಸಬಾರದು ಎಂದು ಅವರು ಹೇಳಿದರು.

ಪ್ರತಾಪ್ ಸಿಂಹ ಅವರ ಹೇಳಿಕೆಗಳಿಗೆ ರಾಜ್ಯದ ವಿವಿಧೆಡೆ ದಲಿತ ಮುಖಂಡರಿAದ ಆಕ್ಷೇಪ ವ್ಯಕ್ತವಾಗಿದ್ದು, ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

ಸಂಗಪ್ಪ ಇಟ್ಟೆನ್ನವರ, ಶಿವಾನಂದ ಸಿಂಘೆ, ಅನಂತ ಸದಲಗಿ ಸೇರಿದಂತೆ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.