Home ಜಿಲ್ಲೆ ಬೆಂಗಳೂರು ಗೆಲುವು – ಸೋಲು – ಕ್ರೀಡೆಯಷ್ಟೆ ಮುಖ್ಯ: ಸತೀಶ್‌ಕುಮಾರ್

ಗೆಲುವು – ಸೋಲು – ಕ್ರೀಡೆಯಷ್ಟೆ ಮುಖ್ಯ: ಸತೀಶ್‌ಕುಮಾರ್


ವಿಜಯಪುರ, ಸೆ. ೨೦: ಕ್ರೀಡೆಯಲ್ಲಿ ಪಾಲ್ಗೊಂಡಾಗ ಒಬ್ಬರಿಗೆ ಗೆಲುವು, ಮತ್ತೊಬ್ಬರಿಗೆ ಸೋಲು ಸಹಜ. ಆದರೆ ಗೆಲುವು ಯಾರದೇ ಆಗಿದ್ದರೂ ಅದನ್ನು ಕ್ರೀಡೆಯ ಗೆಲುವು ಹಾಗೂ ಪಂದ್ಯಾವಳಿ ಆಯೋಜಿಸಿದ ತಂಡದ ಗೆಲುವು ಎಂದು ಭಾವಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಎಂ. ಸತೀಶ್ ಕುಮಾರ್ ಹೇಳಿದರು.


ಗಾಂಧಿ ಚೌಕದಲ್ಲಿರುವ ಶ್ರೀನಾಯಕ ಭಕ್ತ ಮಂಡಳಿ ವತಿಯಿಂದ ೯೧ನೇ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಎಲೆ ಪುಟ್ಟಣ್ಣನವರ ಸ್ಮರಣಾರ್ಥ ನಾಲ್ಕನೇ ವರ್ಷದ ನಗರ್ಥ ಪ್ರೀಮಿಯರ್ ಲೀಗ್ (ಎನ್‌ಪಿಎಲ್) ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ, ಗಾಂಧಿ ಚೌಕದಲ್ಲಿ ಬೃಹತ್ ಗಣೇಶ ಮೂರ್ತಿಯ ಮುಂಭಾಗದಲ್ಲಿ ಆಯೋಜಿಸಿದ್ದ ೧೦೦ಕ್ಕೂ ಹೆಚ್ಚು ಬೈಕ್‌ಗಳ ರ್‍ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.


ಕ್ರೀಡೆ ಯುವಜನರಲ್ಲಿ ಶಿಸ್ತು, ಸ್ನೇಹ, ಸಹಕಾರ ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗೆಲುವು-ಸೋಲನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವದಿಂದ ಪಂದ್ಯಾವಳಿಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಸತೀಶ್‌ಕುಮಾರ್ ಹೇಳಿದರು.


ಸಂಸ್ಕೃತಿ, ಕ್ರೀಡೆಯ ಪರಂಪರೆ ಮುಂದುವರಿಯಲಿ: ಚಂದನ್
ನೇಟಿವ್ ಡ್ರೀಮ್ಸ್ ಟೆಕ್ನಾಲಜಿಯ ಸಂಸ್ಥಾಪಕರಾದ ಚಂದನ್ ಮಾತನಾಡಿ, ನಮ್ಮ ಸಂಸ್ಕಾರ, ಸಂಸ್ಕೃತಿ ಹಾಗೂ ಕ್ರೀಡಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.


ಕಳೆದ ೯೦ ವರ್ಷಗಳಿಂದ ನಾಲ್ಕಾರು ತಲೆಮಾರುಗಳು ಗಣೇಶೋತ್ಸವವನ್ನು ನಿರಂತರವಾಗಿ ಆಚರಿಸಿಕೊಂಡು ಬಂದಿವೆ. ಈ ಪರಂಪರೆ ಮುಂದುವರಿಯಲು ಮುಂದಿನ ತಲೆಮಾರಿನ ಯುವಕರಿಗೆ ಜವಾಬ್ದಾರಿ ವಹಿಸಬೇಕು. ಯುವಕರು ಸಂಸ್ಕೃತಿ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಆರು ತಂಡಗಳ ಕ್ರಿಕೆಟ್ ಪಂದ್ಯಾವಳಿ
ಶನಿವಾರ ಮತ್ತು ಭಾನುವಾರ ನಗರದಲ್ಲಿ ಆರು ತಂಡಗಳ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಗೆ ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ನಗರ್ಥ ಯುವಕ ಸಂಘದ ಅಧ್ಯಕ್ಷ ವಿ. ಬಸವರಾಜ ಮನವಿ ಮಾಡಿದರು.


ಈ ವರ್ಷ ನಗರ್ಥ ಯುವಕ ಸಂಘದ ೨೫ನೇ ವಾರ್ಷಿಕೋತ್ಸವವನ್ನು ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲಾಗುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.


ಕಾರ್ಯಕ್ರಮದಲ್ಲಿ ಪ್ರಗತಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಕೃಪಾಶಂಕರ್, ಮಹಾತ್ಮನ ಮಠದ ಅಧ್ಯಕ್ಷ ಎಸ್. ಪುನೀತ್, ಕಾರ್ಯದರ್ಶಿ ವಿ. ವಿಶ್ವನಾಥ್, ಮಹಾಂತೀನೋಡದ ಶ್ರೀ ಸುರೇಶ್, ಯುವಕ ಸಂಘದ ಪ್ರವೀಣ್, ಬೇಕರಿ ಶಿವಣ್ಣ, ವೀರೇಶ್, ಸುಜಯ್, ಸಿ. ಭಾಸ್ಕರ್, ಶಿಲ್ಪಾ ಅಜಿತ್, ವಿಜಯ್‌ಕುಮಾರ್, ಮಂಜುನಾಥ್, ಮನೋಹರ್, ಬಾಬು, ಬಿ.ಸಿ. ಸಿದ್ದರಾಜು ಸೇರಿದಂತೆ ಹಲವಾರು ಗಣ್ಯರು ಹಾಗೂ ಯುವಕರು ಉಪಸ್ಥಿತರಿದ್ದರು.