
ಕೋಲಾರ, ಸೆ. ೨೦: ಕೋಮುಲ್ ನೇತೃತ್ವದಲ್ಲಿಯೇ ಪಶು ಆಹಾರ ಘಟಕವನ್ನು ಆರಂಭಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಸರ್ವ ಸದಸ್ಯರೂ ಒತ್ತಾಯಿಸಿದ್ದಾರೆ. ಈ ಕುರಿತು ಸರ್ಕಾರದ ಗಮನಕ್ಕೆ ತಂದ ಬಳಿಕ ಮಂಜೂರಾತಿ ದೊರೆತ ತಕ್ಷಣ ಘಟಕ ಆರಂಭಿಸಲು ಕ್ರಮವಹಿಸಲಾಗುತ್ತದೆ ಎಂದು ಕೋಮುಲ್ ಅಧ್ಯಕ್ಷ ಹಾಗೂ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಹೇಳಿದರು.
ನಗರದ ಹೊರವಲಯದ ನಂದಿನಿ ಪ್ಯಾಲೇಸ್ನಲ್ಲಿ ಶನಿವಾರ ನಡೆದ ಕೋಮುಲ್ ಒಕ್ಕೂಟದ ೨೦೨೫-೨೬ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವಿಭಜಿತ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ಇದ್ದಾಗ ಸಾದಲಿ ಹತ್ತಿರ ಪಶು ಆಹಾರ ಘಟಕವಿತ್ತು. ಇದೀಗ ಜಿಲ್ಲೆ ವಿಭಜನೆಯಾಗಿರುವ ಹಿನ್ನಲೆಯಲ್ಲಿ ಕೋಮುಲ್ ವ್ಯಾಪ್ತಿಯಲ್ಲಿಯೇ ಪಶು ಆಹಾರ ಘಟಕ ಸ್ಥಾಪಿಸುವ ಅಗತ್ಯವಿದೆ. ರಾಜಾನುಕುಂಟೆಯಲ್ಲಿ ಇರುವ ಘಟಕದ ಪಶು ಆಹಾರದ ಗುಣಮಟ್ಟದ ಬಗ್ಗೆ ಹಲವು ಸಂಘಗಳು ಆಕ್ಷೇಪ ವ್ಯಕ್ತಪಡಿಸಿವೆ. ಹೀಗಾಗಿ ಕೋಮುಲ್ನಿಂದಲೇ ಗುಣಮಟ್ಟದ ಪಶು ಆಹಾರ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸುಮಾರು ೧೯೮೭ರಲ್ಲಿ ಬೆಂಗಳೂರು ಒಕ್ಕೂಟದಿಂದ ವಿಭಜನೆಯಾಗಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆಯಾದಾಗ ಎರಡೂ ಜಿಲ್ಲೆಗಳಲ್ಲಿ ೪೨೨ ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಈಗ ಕೋಲಾರ ಜಿಲ್ಲೆಯಲ್ಲೇ ೧,೦೧೬ ಸಂಘಗಳಿದ್ದು, ಪ್ರತಿದಿನ ಸುಮಾರು ೮ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಒಕ್ಕೂಟವು ರೂ ೧,೪೦೨ ಕೋಟಿ ವಹಿವಾಟು ನಡೆಸುತ್ತಿದೆ. ಎರಡು ಜಿಲ್ಲೆಗಳಿಂದ ಪ್ರಾರಂಭವಾದಾಗ ಒಕ್ಕೂಟದ ಆಸ್ತಿ ಸುಮಾರು ರೂ ೫ ಕೋಟಿ ಇತ್ತು. ಈಗ ಕೋಲಾರ ಜಿಲ್ಲೆಯಲ್ಲೇ ರೂ ೪೯೦ ಕೋಟಿ ಆಸ್ತಿ ಇದೆ ಎಂದು ವಿವರಿಸಿದರು.
ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ಎಂವಿಕೆ ಡೇರಿ, ಸೋಲಾರ್ ಪ್ಲಾಂಟ್ ಹಾಗೂ ಐಸ್ಕ್ರೀಂ ಘಟಕ ಸ್ಥಾಪಿಸಲಾಗಿದೆ. ಸೋಲಾರ್ ಪ್ಲಾಂಟ್ನಿಂದ ಒಂಬತ್ತು ತಿಂಗಳಲ್ಲಿ ಸುಮಾರು ರೂ ೯ ಕೋಟಿ ಉಳಿತಾಯವಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ೨೩೭ ಬಿಎಸ್ಸಿ ಕೇಂದ್ರಗಳಿಗೆ ಸೋಲಾರ್ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಟ್ಟಪ್ಪನಹಳ್ಳಿ ಡೇರಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಒಕ್ಕೂಟದಿಂದ ನೀಡಲಾಗುತ್ತಿರುವ ಪಶು ಆಹಾರದ ಗುಣಮಟ್ಟದ ಬಗ್ಗೆ ಹಲವಾರು ಹಾಲು ಉತ್ಪಾದಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಮುಲ್ನಿಂದಲೇ ಪಶು ಆಹಾರ ಘಟಕ ಆರಂಭಿಸಿ ಗುಣಮಟ್ಟದ ಆಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಹಾಲು ಉತ್ಪಾದಕರಿಗೆ ರೂ ೧ ಕಡಿತ ಸ್ಥಗಿತಗೊಳಿಸಬೇಕೆಂದು ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ. ಅಮರೇಶ್ ಮಾತನಾಡಿ, ಎಂವಿಕೆ ಡೇರಿ ನಿರ್ಮಾಣದ ಸಂದರ್ಭದಲ್ಲಿ ಹಾಲು ಉತ್ಪಾದಕರ ಪ್ರತಿ ಲೀಟರ್ ಹಾಲಿಗೆ ರೂ ೧ ಕಡಿತ ಮಾಡಲಾಗಿತ್ತು. ಈಗ ಡೇರಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ಜಿಲ್ಲೆಯ ಆರು ತಾಲ್ಲೂಕುಗಳು ಬರಗಾಲದಿಂದ ತತ್ತರಿಸಿರುವ ಕಾರಣ ಮಾಡಲಾಗುತ್ತಿರುವ ರೂ ೧ ಕಡಿತವನ್ನು ನಿಲ್ಲಿಸಿ, ಆ ಹಣವನ್ನು ಪುನಃ ಉತ್ಪಾದಕರಿಗೆ ಕೊಡುವಂತೆ ಒತ್ತಾಯಿಸಿದರು.
ಈಗ ಜಾರಿ ಮಾಡಲಾಗುತ್ತಿರುವ ಕಡಿತದ ಕುರಿತು ಪ್ರತಿಕ್ರಿಯಿಸಿದ ನಂಜೇಗೌಡ ಅವರು, ಎಂವಿಕೆ ಡೇರಿ ನಿರ್ಮಾಣಕ್ಕೆ ಹಿಂದೆ ಸರ್ಕಾರದಿಂದ ಅನುದಾನ ದೊರಕದ ಕಾರಣ ಹಾಲು ಉತ್ಪಾದಕರಿಂದ ರೂ ೧ ಕಡಿತ ಮಾಡಲಾಗಿತ್ತು. ಈಗ ಡೇರಿ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಉತ್ಪಾದಕರ ಬೇಡಿಕೆಯ ಬಗ್ಗೆ ಚರ್ಚಿಸಲಾಗುವುದು. ಹಾಲಿನ ದರವನ್ನು ಪ್ರತಿ ಲೀಟರ್ಗೆ ರೂ ೫ ರಿಂದ ೧೦ ರಷ್ಟು ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ. ಈ ಸಂಬಂಧ ರಾಜ್ಯದ ೧೬ ಹಾಲು ಒಕ್ಕೂಟಗಳ ವತಿಯಿಂದ ಬಾಂಗ್ಲೂರಿನಲ್ಲಿ ಸೆ. ೨೨ ರಂದು ಹಾಲು ಉತ್ಪಾದಕರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಹಾಲು ಉತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಗರುಡಪಾಳ್ಯ ಡೇರಿ ಅಧ್ಯಕ್ಷ ಪ್ರಸಾದ್ ಮಾತನಾಡಿ, ಟ್ರಸ್ಟ್ ಹಣ ಮತ್ತು ಯಂತ್ರೋಪಕರಣಗಳ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕೋಮುಲ್ ಟ್ರಸ್ಟ್ಗೆ ನೀಡುವಂತೆ ಪ್ರತಿ ಲೀಟರ್ ಹಾಲಿನಿಂದ ೧೫ ಪೈಸೆ ಕಡಿತ ಮಾಡಲಾಗುತ್ತಿದೆ. ಇದರಿಂದ ರೂ ೨.೯೯ ಕೋಟಿ ಸಂಗ್ರಹವಾಗಿದೆ. ಆದರೆ, ಅವಿಭಜಿತ ಜಿಲ್ಲೆ ಇದ್ದಾಗ ಟ್ರಸ್ಟ್ನಲ್ಲಿ ಸಂಗ್ರಹವಾಗಿದ್ದ ಹಣದ ಕುರಿತ ಮಾಹಿತಿ ನೀಡಿಲ್ಲ. ಸಭೆಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದರು.
ಸಂಘಗಳ ಪ್ರತಿನಿಧಿಗಳು ಮಾತನಾಡಿ, ಕೋಮುಲ್ನಿಂದ ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ಯಂತ್ರೋಪಕರಣಗಳ ಗುಣಮಟ್ಟ ಕಳಪೆಯಾಗಿದೆ. ರಾಸುಗಳು ಅಕಾಲಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ಕೂಡಲೇ ಪರಿಹಾರ ನೀಡಬೇಕು. ಹಿಂದೆ ಚಿಂತಾಮಣಿಯಲ್ಲಿ ಇದ್ದ ಪರೀಕ್ಷಾ ಕೇಂದ್ರ ಜಿಲ್ಲೆ ವಿಭಜನೆಯ ನಂತರ ಇಲ್ಲದಂತಾಗಿದೆ. ಕೋಲಾರ ಜಿಲ್ಲೆಯಲ್ಲಿಯೇ ಪ್ರತ್ಯೇಕ ಪರೀಕ್ಷಾ ಕೇಂದ್ರವನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಕೋಮುಲ್ ಒಕ್ಕೂಟದ ನಿರ್ದೇಶಕ ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ನಿರ್ದೇಶಕರಾದ ಜಯಸಿಂಹ, ಕೃಷ್ಣಪ್ಪ, ಕಾಡೇನಹಳ್ಳಿ ನಾಗರಾಜ್, ವಡಗೂರು ಡಿ.ವಿ. ಹರೀಶ್, ಹನುಮೇಗೌಡ, ಕಾಂತಮ್ಮ, ಚಂಜಿಮಲೆ ಬಿ. ರಮೇಶ್, ಚೆಲುವನಹಳ್ಳಿ ನಾಗರಾಜ್, ಕೆ.ಕೆ. ಮಂಜುನಾಥ್, ಶ್ಯಾಮೇಗೌಡ, ಶ್ರೀನಿವಾಸ್, ಮಹಾಲಕ್ಷ್ಮಿ, ಷಂಷೀರ್, ಎಂ.ಡಿ. ರಾಜು ಸೇರಿದಂತೆ ಹಾಲು ಉತ್ಪಾದಕರ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.































