Home ಜಿಲ್ಲೆ ಬೆಂಗಳೂರು ಸಮಾಜದಲ್ಲಿ ಸೌಹಾರ್ದ ಬೆಳಸಲು ಕರೆ

ಸಮಾಜದಲ್ಲಿ ಸೌಹಾರ್ದ ಬೆಳಸಲು ಕರೆ

ಮಾಲೂರು ಸೆ೧೨: ಗಣೇಶೋತ್ಸವ ಕೇವಲ ಹಬ್ಬವಲ್ಲ. ಇದು ಗ್ರಾಮಗಳ ಯುವಕರನ್ನು ಒಗ್ಗೂಡಿಸಿ, ಸಮಾಜದಲ್ಲಿ ಸೌಹಾರ್ದತೆ ಬೆಳೆಸುವುದರ ಜೊತೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ವೇದಿಕೆಯಾಗಿದೆ ಎಂದು ಮಾಲೂರು ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಹೇಳಿದರು.
ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯ ಕೊಮ್ಮನಹಳ್ಳಿ ಗ್ರಾಮದ ಶಾಸಕರ ನಿವಾಸದಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ತಾಲ್ಲೂಕಿನ ವಿವಿಧ ಗ್ರಾಮಗಳ ಯುವಕರಿಗೆ ಗಣೇಶೋತ್ಸವ ಆಚರಣೆಗೆ ಆರ್ಥಿಕ ಸಹಾಯ ವಿತರಿಸಿ ಮಾತನಾಡಿದರು.


ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನೀಲ್ ಗೌಡ ಕೆ.ಎನ್. ಅವರ ನೇತೃತ್ವದಲ್ಲಿ ಯುವಕರಿಗೆ ತಮ್ಮ ತಮ್ಮ ಗ್ರಾಮಗಳಲ್ಲಿ ಗಣೇಶೋತ್ಸವವನ್ನು ಆಚರಿಸಲು ತಲಾ ೫ ಸಾವಿರ ಆರ್ಥಿಕ ಸಹಕಾರ ನೀಡಲಾಯಿತು.ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸುವುದರ ಜೊತೆಗೆ ಶಾಂತಿ, ಸೌಹಾರ್ದತೆ ಕಾಪಾಡಬೇಕು. ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ನೀಡಿರುವ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಶಾಸಕರು ಯುವಕರಿಗೆ ಕರೆ ನೀಡಿದರು.


ತಾಲ್ಲೂಕಿನಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ವಿರೋಧ ಪಕ್ಷದವರು ಮಾಡುತ್ತಿರುವ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಾಲ್ಲೂಕಿನ ಅಭಿವೃದ್ಧಿ ಹಾಗೂ ತಾಲ್ಲೂಕಿನ ಪ್ರಗತಿಗೆ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ ಎಂದು ಕೆ.ವೈ. ನಂಜೇಗೌಡ ಹೇಳಿದರು.


ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನೀಲ್ ಗೌಡ ಕೆ.ಎನ್. ಮಾತನಾಡಿ, ಗಣೇಶೋತ್ಸವದ ಮೂಲಕ ಯುವಕರು ಒಗ್ಗಟ್ಟಾಗಿ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕು. ಹಬ್ಬದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ, ಶಾಂತಿ ಮತ್ತು ಸೌಹಾರ್ದತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.


“ಹಬ್ಬ ನಮ್ಮ ಸಂಭ್ರಮ, ಶಾಂತಿ ನಮ್ಮ ಜವಾಬ್ದಾರಿ” ಎಂಬ ಸಂದೇಶದೊಂದಿಗೆ ಗೌರಿ-ಗಣೇಶ ಹಬ್ಬವನ್ನು ಎಲ್ಲರೂ ಸಂಭ್ರಮ, ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸುವಂತೆ ಮುಖಂಡರು ಕರೆ ನೀಡಿದರು.


ಈ ಸಂದರ್ಭದಲ್ಲಿ ದರ್ಕಸ್ತು ಸಮಿತಿ ಅಧ್ಯಕ್ಷ ಹನುಮಂತಪ್ಪ ಜಿ ಪಂ ಮಾಜಿ ಅಧ್ಯಕ್ಷೆ ರತ್ನಮ್ಮ ನಂಜೇಗೌಡ, ಮಾಜಿ ಸದಸ್ಯ ಬಿ ಕೆ ರವಿಶಂಕರ್ ಕ್ಷೇತ್ರನಹಳ್ಳಿ ವೆಂಕಟೇಶಗೌಡ, ಹೀರೇಗೌಡ, ರಾಮಮೂರ್ತಿ, ಚೇತನ್ ಕುಮಾರ್, ಡಾ. ಪಿ.ಜಿ. ಗಿರಿ, ದಿನ್ನಹಳ್ಳಿ ರಮೇಶ್ ಈಶ್ವರ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಯುವಕರು ಹಾಜರಿದ್ದರು.