Home ಜಿಲ್ಲೆ ಬೆಂಗಳೂರು ಶೇ. ೧೦೦ ಸಾಕ್ಷರತಾ ಜಿಲ್ಲೆಯಾಗಲು ಎಲ್ಲರ ಸಹಕಾರ ಅಗತ್ಯ

ಶೇ. ೧೦೦ ಸಾಕ್ಷರತಾ ಜಿಲ್ಲೆಯಾಗಲು ಎಲ್ಲರ ಸಹಕಾರ ಅಗತ್ಯ

ಕೋಲಾರ,ಸೆ,೯-ಸಮಾಜದ ಏಳಿಗೆ ಹಾಗೂ ಜನರರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಸಾಕ್ಷರತೆ ಅತ್ಯಂತ ಅವಶ್ಯಕವಾಗಿದ್ದು, ಕೋಲಾರ ಜಿಲ್ಲೆಯನ್ನು ಶೇ.೧೦೦ರಷ ಸಾಕ್ಷರತಾ ಜಿಲ್ಲೆಯನ್ನಾಗಿಸಲು ಎಲ್ಲಾ ಇಲಾಖೆಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ ಕರೆ ನೀಡಿದರು.


ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ’ಸಾಕ್ಷರತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಕೇವಲ ಶೇ. ೧೮ ರಷ್ಟಿದ್ದ ಸಾಕ್ಷರತೆ ಪ್ರಮಾಣ ಇಂದು ಶೇ.೮೦ರ ಸನಿಹ ತಲುಪಿದೆ. ಸಮಾಜ ವಿಕಸಿತವಾಗಲು ಶಿಕ್ಷಣವೇ ಬುನಾದಿ. ಅಂದಿನ ಕಠಿಣ ಪರಿಸ್ಥಿತಿಯಲ್ಲಿಯೂ ಮಹಿಳೆಯರಿಗೆ ಶಿಕ್ಷಣ ನೀಡಲು ಶ್ರಮಿಸಿದ ಸಾವಿತ್ರಿಬಾಯಿ ಫುಲೆ ಹಾಗೂ ದಮನಿತರ, ಶೋಷಿತರ ಏಳಿಗೆಗಾಗಿ ೩೨ ಡಿಗ್ರಿಗಳನ್ನು ಪಡೆದು ಇಡೀ ಸಮಾಜಕ್ಕೆ ಪ್ರೇರಣೆಯಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ನಮಗೆಲ್ಲರಿಗೂ ದಾರಿದೀಪವಾಗಬೇಕು ಎಂದರು.


ಮನೆಯಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ ಮಾಡದೆ, ಇಬ್ಬರಿಗೂ ಸಮಾನ ಅವಕಾಶ ನೀಡುವಂತಹ ಮನಃಪರಿವರ್ತನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಕೇವಲ ಓದು, ಬರಹ ಮತ್ತು ಸಹಿ ಮಾಡುವುದಷ್ಟೇ ಸಾಕ್ಷರತೆಯಲ್ಲ; ಬದಲಾಗಿ ಮೂಢನಂಬಿಕೆಗಳನ್ನು ತೊಡೆದುಹಾಕಿ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವುದು ಹಾಗೂ ಯಾವುದೇ ಸಮಸ್ಯೆಯನ್ನು ತಾರ್ಕಿಕವಾಗಿ ವಿಶ್ಲೇಷಿಸುವುದು ನಿಜವಾದ ಶಿಕ್ಷಣ. ಪ್ರಸ್ತುತ ಜಿಲ್ಲೆಯಲ್ಲಿ ಶೇ. ೮೦ರಷ್ಟ್ಟು ಸಾಧಿಸಿದೆ. ಇದನ್ನು ಶೇ. ೧೦೦ಕ್ಕೆ ಕೊಂಡೊಯ್ಯಲು ಇದೊಂದು ಇಲಾಖೆಯ ಕಾರ್ಯಕ್ರಮವಾಗದೆ ಇಡೀ ಸಮಾಜದ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಸಾಕ್ಷರತಾ ಪ್ರತಿಜ್ಞಾ ಬೋಧನೆ ನೆರವೇರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ ಅವರು, “ಶಿಕ್ಷಣದಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹಾಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಲು ಶಿಕ್ಷಣವೇ ಪ್ರಮುಖ ಅಸ್ತ್ರ. ಜಿಲ್ಲೆಯ ೧೮ ಪಂಚಾಯಿತಿಗಳಲ್ಲಿ ಈಗಾಗಲೇ ಸಾಕ್ಷರತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ ಮಹಿಳೆಯರನ್ನು ಅಕ್ಷರಸ್ಥರನ್ನಾಗಿಸುವ ಕಾರ್ಯ ವ್ಯಾಪಕವಾಗಿ ನಡೆಯಬೇಕಿದೆ” ಎಂದು ಆಶಿಸಿದರು.


ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಕ್ಷರ ಕಲಿತ ನವಸಾಕ್ಷರರನ್ನು ಜಿ.ಪಂ ಸಿಇಒ ಅವರು ಸನ್ಮಾನಿಸಿ ಗೌರವಿಸಿದರು. ಕೋಲಾರ ಡಯಟ್‌ನ ಉಪನ್ಯಾಸಕ ಬಾಲಾಜಿ ಅವರು ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ (ಆಡಳಿತ) ಉಪನಿರ್ದೇಶಕಿ ಅಲ್ಮಾಸ್ ಪರ್ವಿನ್ ತಾಜ್, ಡಯಟ್ ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ಎನ್. ನಂಜುಂಡಯ್ಯ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಮುಖ್ಯಸ್ಥರಾದ ನಾಗರಾಜ್, ಸಾಕ್ಷರತೆಯ ಹಾಗೂ ಕೋಲಾರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಕೋಲಾರ ಡಯಟ್ ತಂತ್ರಜ್ಞರು ಡಾ.ನಾರಾಯಣಸ್ವಾಮಿ ಹಾಗೂ ನಗರದ ಸಿ.ಆರ್.ಪಿ ಸುರೇಶ್ ಬಾಬು, ನೋಡಲ್ ಅಧಿಕಾರಿಗಳು, ಶಿಕ್ಷಕರು, ಸಿಆರ್‌ಪಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.