
ಕನಕಪುರ,ಸೆ.೯- ಹಾರೋಹಳ್ಳಿ ತಾಲೂಕನ್ನು ಬರಪೀಡತ ಪ್ರದೇಶವೆಂದು ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಹಾರೋಹಳ್ಳಿ ತಾಲೂಕಿನ ದೊಡ್ಡಮುದುವಾಡಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಮಾಗಡಿ ಮತ್ತು ರಾಮನಗರ ತಾಲೂಕುಗಳನ್ನು ಮಾತ್ರ ಬರಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಿದೆ, ರಾಮನಗರಕ್ಕಿಂತ ೨ ಸೆಂಟಿಮಿಟರ್ ನಷ್ಟು ಮಳೆ ಹೆಚ್ಚಾಗಿ ಆಗಿದೆ ಎನ್ನುವ ದೃಷ್ಟಿಯಿಂದ ಹಾರೋಹಳ್ಳಿ ತಾಲೂಕನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಆಗಬಹುದಾದ ಪರಿಸ್ಥಿತಿಯನ್ನು ಗಮನಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಉಪ ಮುಖ್ಯ ಮಂತ್ರಿಗಳಿಲ್ಲಿ ಮನವಿಯನ್ನು ಸಲ್ಲಿಸಲಾಗಿದ್ದು ಹಾರೋಹಳ್ಳಿ ತಾಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದ ಹಿನ್ನಲೆಯಲ್ಲಿ ಬರ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಎದುರಾಗಲಿದ್ದು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರದ ಗಮನವನ್ನು ಸೆಳೆಯಲಾಗುವುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಈ ದಿನ ೬.೮೦ ಕೋಟಿ ರೂಗಳ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.ಈ ಎಲ್ಲಾ ಕಾಮಗಾರಿಗಳನ್ನು ಎರಡುವರೆ ತಿಂಗಳ ಹಿಂದೆಯಷ್ಟೇ ಚಾಲನೆ ನೀಡಬೇಕಾಗಿತ್ತು.ಕೆಲವು ಆಡಳಿತಾತ್ಮಕ ಕಾರಣಳಿಂದ ವಿಳಂಬವಾಗಿತ್ತು. ಹಾಗಾಗಿ ಈ ದಿನ ಅಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಮುಖ ನಿರಾವರಿ ಮೂಲವಾಗಿರುವ ಕೆರೆ ತುಂಬಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ ಸುಮಾರು ೫ ವರ್ಷದ ಹಿಂದೆಯಷ್ಟೇ ಕೆರೆ ತುಂಬಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು.ಈ ಯೋಜನೆಗೆ ಸಂಬಂಧಿಸಿದಂತೆ ನಿರಂತರವಾಗಿ ಪ್ರಯತ್ನ ನಡೆಯುತಿದ್ದು,ಮುಂದಿನ ದಿನಗಳಲ್ಲಿ ಕೆರೆಗಳಿಗೆ ನೀರು ಹರಿಸುವ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈ ಗೊಳ್ಳಲಾಗುವುದೆಂದು ಭರವಸೆ ನೀಡಿದರು.ಭೈರಮಂಗಲ ಕೆರೆಯನ್ನು ಶುದ್ಧೀಕರಿಸುವ ಹಾಗೂ ಅಭಿವೃದ್ದಿ ಪಡಿಸುವ ಕೆಲಸಕ್ಕೂ ಅಧ್ಯತೆ ನೀಡಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು ಕೆರೆಯ ಸ್ವಚ್ಚತೆ ಹಾಗೂ ನೀರಿನ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಕೆರೆಗಳ ಅಭಿವೃದ್ದಿ ಯಿಂದ ರೈತರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೆ ರಾಜಿ ಮಾಡಿಕೊಳ್ಳದೆ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣ ಪ್ರಮಾಣದಲ್ಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಬೂಮಲ್ ನಿರ್ದೇಶಕ ಹರೀಶ್ ಕುಮಾರ್, ಹಾರೋಹಳ್ಳಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಪುಟ್ಟಸ್ವಾಮಿ, ಪರಮೇಶ್, ಎಂ.ಎಸ್. ಲಿಂಗೇಗೌಡ, ತಮ್ಮಣ್ಣ ಒಳಗೊಂಡಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
































