
ಕಲಬುರಗಿ, ಬೆಂಗಳೂರು,ಸೆ.3-ಪ್ರಸಕ್ತ ಖಾರಿಫ್ ಹಂಗಾಮಿನಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಕಲಬುರಗಿ ಜಿಲ್ಲೆಯ ರೈತರು ಹಾಗೂ ಗ್ರಾಮೀಣ ಜನತೆ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ 11 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿ, ಅರ್ಹ ರೈತರಿಗೆ ನಿಯಮಾನುಸಾರ ಬರ ಪರಿಹಾರ ಹಾಗೂ ಅಗತ್ಯ ಆರ್ಥಿಕ ನೆರವು ಒದಗಿಸುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರು ಸರ್ಕಾರವನ್ನು ಒತ್ತಾಯಿಸಿ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯನ್ನು ಪರಿಗಣಿಸಿ ರಾಜ್ಯದ 89 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 12 ತಾಲ್ಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ವರ್ಗೀಕರಿಸಿ, ಒಟ್ಟು 101 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿದೆ.
ಆದರೆ ಕಲಬುರಗಿ ಜಿಲ್ಲೆಯ ಜೇವರ್ಗಿ, ಯಡ್ರಾಮಿ, ಕಲಬುರಗಿ, ಆಳಂದ, ಅಫಜಲಪುರ, ಸೇಡಂ, ಚಿತ್ತಾಪುರ, ಚಿಂಚೋಳಿ, ಶಹಾಬಾದ್, ಕಾಳಗಿ ಹಾಗೂ ಕಮಲಾಪುರ ತಾಲ್ಲೂಕುಗಳಲ್ಲಿ ಮುಂಗಾರು ಮಳೆಯ ತೀವ್ರ ಕೊರತೆ ಉಂಟಾಗಿದ್ದರೂ, ಈ ತಾಲ್ಲೂಕುಗಳು ಬರಪೀಡಿತ ಪಟ್ಟಿಯಿಂದ ಹೊರಗುಳಿದಿವೆ. ಇದರಿಂದ ಈ ಭಾಗದ ರೈತರು ಹಾಗೂ ಜಾನುವಾರುಗಳು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಸಚಿವರು ಮನವಿಯಲ್ಲಿ ಗಮನ ಸೆಳೆದದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಮೂಲಕ ತ್ವರಿತವಾಗಿ ಮರುಪರಿಶೀಲನೆ ಹಾಗೂ ಸ್ಥಳ ಪರಿಶೀಲನೆ ನಡೆಸಿ, ವಾಸ್ತವ ಮಳೆ ಪರಿಸ್ಥಿತಿ ಮತ್ತು ಬೆಳೆ ಹಾನಿಯನ್ನು ವೈಜ್ಞಾನಿಕವಾಗಿ ಅಂದಾಜಿಸಿ, ಕಲಬುರಗಿ ಜಿಲ್ಲೆಯ ಈ 11 ತಾಲ್ಲೂಕುಗಳನ್ನು ‘ಖಾರಿಫ್-2026ರ ಬರಪೀಡಿತ ತಾಲ್ಲೂಕುಗಳು’ ಎಂದು ಘೋಷಿಸುವಂತೆ ಸಚಿವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಲ್ಲದೆ, ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೊಳಗಾಗಿರುವ ಅರ್ಹ ರೈತರಿಗೆ ಸರ್ಕಾರದ ನಿಯಮಾನುಸಾರ ಬೆಳೆ ನಷ್ಟ ಪರಿಹಾರ, ಆರ್ಥಿಕ ನೆರವು ಹಾಗೂ ಅಗತ್ಯ ಪರಿಹಾರ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜೇವರ್ಗಿ ಹಾಗೂ ಯಡ್ರಾಮಿ ತಾಲೂಕು ಬರಗಾಲ ಪೀಡಿತವೆಂದು ಘೋಷಿಸುವ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಾಗಿದೆ. ಈ ವಿಚಾರದಲ್ಲಿ ತಾವು ಸದಾಕಾಲ ರೈತರ ಪರವಾಗಿರೋದಾಗಿ ಹೇಳಿರುವ ಡಾ. ಅಜಯ್ ಸಿಂಗ್ ರೈತರು, ಜೇವರ್ಗಿ ಕ್ಷೇತ್ರದ ಜನತೆ ತಾಳ್ಮೆಯಿಂದ ಇದ್ದು ಸಹಕರಿಸುವಂತೆಯೂ ಕೋರಿದ್ದಾರೆ.






























