Home ಸುದ್ದಿ ರಾಷ್ಟ್ರೀಯ ಗಣಪತಿಗೆ ೬೬ ಕೆಜಿ ಚಿನ್ನ ೩೩೩ ಕೆಜಿ ಬೆಳ್ಳಿ ಅಲಂಕಾರ

ಗಣಪತಿಗೆ ೬೬ ಕೆಜಿ ಚಿನ್ನ ೩೩೩ ಕೆಜಿ ಬೆಳ್ಳಿ ಅಲಂಕಾರ

ಮುಂಬೈ,ಸೆ.೩-ಮುಂಬೈನ ಮಟುಂಗಾದಲ್ಲಿರುವ ಪ್ರಸಿದ್ಧ ಜಿಎಸ್‌ಬಿ ಸೇವಾ ಮಂಡಲವು ತನ್ನ ೭೨ನೇ ವರ್ಷದ ಗಣೇಶೋತ್ಸವ ಆಚರಣೆಗೆ ಸಜ್ಜಾಗಿದ್ದು, ಈ ಬಾರಿಯೂ ಭಾರತದ ಅತ್ಯಂತ ಶ್ರೀಮಂತ ಗಣಪತಿ ಪಂಡಾಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಾರಿ ಮಹಾಗಣಪತಿಯ ಮೂರ್ತಿಯನ್ನು ಭಕ್ತರು ನೀಡಿದ ಸುಮಾರು ೬೬ ಕಿಲೋಗ್ರಾಂ ಗಿಂತಲೂ ಹೆಚ್ಚು ಚಿನ್ನ, ೩೩೫ ಕಿಲೋಗ್ರಾಂ ಬೆಳ್ಳಿ ಮತ್ತು ಅಮೂಲ್ಯ ರತ್ನಗಳಿಂದ ಅತ್ಯಂತ ಭವ್ಯವಾಗಿ ಅಲಂಕರಿಸಲಾಗುತ್ತಿದೆ.

ಈ ಬಾರಿಯ ಉತ್ಸವಕ್ಕಾಗಿ ಮಂಡಲವು ಭಕ್ತರ ಸುರಕ್ಷತೆ ಮತ್ತು ಬೆಲೆಬಾಳುವ ಆಭರಣಗಳ ರಕ್ಷಣೆಗಾಗಿ ಒಟ್ಟು ೭೦೩.೨೭ ಕೋಟಿ ರೂಪಾಯಿಗಳ ಬೃಹತ್ ವಿಮಾ ರಕ್ಷಣೆಯನ್ನು ಪಡೆದುಕೊಂಡಿದ್ದು, ಇದು ದೇಶದಲ್ಲೇ ಹೊಸ ದಾಖಲೆಯಾಗಿದೆ. ಮೂರ್ತಿಯನ್ನು ಸಂಪೂರ್ಣವಾಗಿ ಪರಿಸರ ಸ್ನೇಹಿ ಸಾಮಗ್ರಿಗಳಿಂದ ತಯಾರಿಸಲಾಗಿದ್ದು, ಈ ಬಾರಿ ರಸೀದಿಗಳನ್ನು ಡಿಜಿಟಲ್ ರೂಪಕ್ಕೆ ತರುವ ಮೂಲಕ ಸಂಪೂರ್ಣವಾಗಿ ಕಾಗದ ರಹಿತ ಹಾಗೂ ಪರಿಸರ ಸ್ನೇಹಿ ಸಂಪ್ರದಾಯವನ್ನು ಅಳವಡಿಸಿಕೊಳ್ಳಲಾಗಿದೆ. ಐದು ದಿನಗಳ ಕಾಲ ನಡೆಯುವ ಈ ವೈಭವೋಪೇತ ಗಣೇಶೋತ್ಸವದಲ್ಲಿ ಪ್ರತಿದಿನವೂ ಸಾಂಪ್ರದಾಯಿಕ ವೈದಿಕ ವಿಧಿವಿಧಾನಗಳು ಜರುಗಲಿದ್ದು, ಪ್ರಸಾದ ಭೋಜನ ಸೇವೆಯಲ್ಲಿ ಪ್ರತಿದಿನ ಸುಮಾರು ೪೦ ಸಾವಿರಕ್ಕೂ ಹೆಚ್ಚು ಭಕ್ತರಿಗೆ ಬಾಳೆಎಲೆಯಲ್ಲಿ ಅನ್ನದಾನ ಪ್ರಸಾದವನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಈ ದಿವ್ಯ ಮಹಾಗಣಪತಿಯ ಮೊದಲ ನೋಟದ ’ವಿರಾಟ್ ದರ್ಶನ’ವು ಸೆಪ್ಟೆಂಬರ್ ೧೨ರಂದು ನೆರವೇರಲಿದ್ದು, ಮುಖ್ಯ ಉತ್ಸವವು ಸೆಪ್ಟೆಂಬರ್ ೧೪ರಿಂದ ೧೮ರವರೆಗೆ ಜರುಗಲಿದೆ.