
ಜಮಖಂಡಿ: ಅಥಣಿ ಮತಕ್ಷೇತ್ರದ ನೂತನ ಸಚಿವ ಲಕ್ಷ್ಮಣ ಸವದಿ ಅವರು ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದ ನಡುಗಡ್ಡೆ ಸೇತುವೆ ಕಾಮಗಾರಿ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಿದ್ದು, ಕಾಮಗಾರಿಗೆ ಅಗತ್ಯ ಅನುದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಕಳೆದ ಅಧಿವೇಶನದಲ್ಲಿ ಕಂಕಣವಾಡಿ ನಡುಗಡ್ಡೆ ಸೇತುವೆ ಹಾಗೂ ಅಥಣಿ ಪಟ್ಟಣದ ಗೋಶಿರಪ್ಪನ ಗಡ್ಡೆ ಪ್ರದೇಶದ ಸೇತುವೆ ಕಾಮಗಾರಿ ಕುರಿತು ಮಾತನಾಡಿದ್ದೇನೆ. ಈ ಕಾಮಗಾರಿಗಳಿಗೆ ಹಣಕಾಸು ಇಲಾಖೆಯಿಂದ ಅನುದಾನ ಒದಗಿಸುವಂತೆ ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ನೇಹಪರ ಸಂಬಂಧ ಹೊಂದಿರುವ ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡಿದ್ದರಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಬಳಿಕ ವಿಜಯಪುರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಿಂದಗಿಗೆ ತೆರಳುತ್ತಿರುವುದಾಗಿ ಸಚಿವರು ತಿಳಿಸಿದರು.
ಸಕ್ಕರೆ ಬೆಲೆ ಏರಿಕೆ: ರೈತರಿಗೆ ಅನುಕೂಲವಾಗಲಿ
ಸಕ್ಕರೆ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಲಕ್ಷ್ಮಣ ಸವದಿ, ಸಕ್ಕರೆ ದಾಸ್ತಾನು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಿ ಸಕ್ಕರೆ ಉತ್ಪಾದನೆ ಹೆಚ್ಚಿಸುವ ಮೂಲಕ ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿಗಳು ಈ ಕುರಿತು ಈಗಾಗಲೇ ಸೂಚನೆ ನೀಡಿದ್ದಾರೆ. ಸಕ್ಕರೆ ಬೆಲೆ ಸ್ವಲ್ಪ ಹೆಚ್ಚಾದರೆ ಅದರ ಲಾಭ ಕಬ್ಬು ಬೆಳೆಗಾರರಿಗೆ ದೊರೆಯುತ್ತದೆ. ಒಂದು ನೀರಿನ ಬಾಟಲಿಗೆ ?120 ನೀಡಿ ನೀರು ಕುಡಿಯುವ ಜನರು, ?50 ನೀಡಿ ಒಂದು ಕೆಜಿ ಸಕ್ಕರೆ ಖರೀದಿಸಿದರೆ ಏನೂ ಆಗುವುದಿಲ್ಲ. ಇದರಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ್ ಕಲೂತಿ, ಉಪಾಧ್ಯಕ್ಷ ಮಾಮೂನರಸೀದ್ ಪಾರ್ಥನಳ್ಳಿ, ಸದಸ್ಯ ದರೆಪ್ಪ ತೇಲಿ, ಶ್ರೀಶೈಲ ದಳವಾಯಿ, ನಗರಸಭೆ ಮಾಜಿ ಅಧ್ಯಕ್ಷ ಪರಮಾನಂದ ಗವರೋಜಿ, ಇಲಾಹಿ ಕಂಗನೋಳ್ಳಿ, ನರಸಪ್ಪ ತೇಲಿ, ಶ್ರೀಶೈಲ ತೇಲಿ, ನ್ಯಾಯಾವದಿ ಎನ್.ಎಸ್.ದೇವರವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.































