Home ಸಿನೆಮಾ ಬಾಲಿವುಡ್ ಕಾರ್ತಿಕ್ ಆರ್ಯನ್ ಮೊಣಕಾಲಿಗೆ ತೀವ್ರ ಗಾಯ, ಆಸ್ಪತ್ರೆಗೆ ದಾಖಲು

ಕಾರ್ತಿಕ್ ಆರ್ಯನ್ ಮೊಣಕಾಲಿಗೆ ತೀವ್ರ ಗಾಯ, ಆಸ್ಪತ್ರೆಗೆ ದಾಖಲು

ಮುಂಬೈ, ಆ. ೧೯- ಬಾಲಿವುಡ್‌ನ ಯಂಗ್ ಹಾಗೂ ಮೋಸ್ಟ್ ಸಕ್ಸಸ್‌ಫುಲ್ ಹೀರೋ ಕಾರ್ತಿಕ್ ಆರ್ಯನ್ ಅಭಿಮಾನಿಗಳಿಗೆ ಒಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ! ಸಾಹಸಮಯ ದೃಶ್ಯವೊಂದರ ಶೂಟಿಂಗ್ ವೇಳೆ ಕಾರ್ತಿಕ್ ಅವರ ಮೊಣಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಪ್ರಸ್ತುತ ಅವರನ್ನು ಮುಂಬೈನ ಫೋರ್ಟಿಸ್ ರಹೇಜಾ ಆಸ್ಪತ್ರೆಗೆ ದಾಖಲಿಸಲಾಗಿದೆ.


ಖ್ಯಾತ ನಿರ್ದೇಶಕ ಕಬೀರ್ ಖಾನ್ ನಿರ್ದೇಶನದ ಮುಂಬರುವ ಸ್ಪೋರ್ಟ್ಸ್ ಕಥೆಯ ಹಿನ್ನೆಲೆಯುಳ್ಳ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿತ್ತು. ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಅವರು ಕಾಶ್ಮೀರದ ಬಾಲಕಿಯೊಬ್ಬಳಿಗೆ ಕಿಕ್ ಬಾಕ್ಸಿಂಗ್ ತರಬೇತಿ ನೀಡುವ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ರೋಮಾಂಚಕ ಸಾಹಸ ದೃಶ್ಯಗಳಿಗಾಗಿ ಕಾರ್ತಿಕ್ ಕಳೆದ ಕೆಲವು ದಿನಗಳಿಂದ ಹಾರ್ಡ್‌ವರ್ಕ್ ಮಾಡುತ್ತಾ, ಆಕ್ಷನ್ ಕೋಚ್‌ಗಳ ಮಾರ್ಗದರ್ಶನದಲ್ಲಿ ಕಠಿಣ ತರಬೇತಿಯನ್ನೂ ಪಡೆದಿದ್ದರು.


ಮುಂಬೈನಲ್ಲಿ ನಡೆಯುತ್ತಿದ್ದ ಶೂಟಿಂಗ್‌ನ ಕೊನೆಯ ಎರಡು ದಿನಗಳಲ್ಲಿ ಅತ್ಯಂತ ಹೈ-ವೋಲ್ಟೇಜ್ ಆಕ್ಷನ್ ಸೀನ್‌ಗಳನ್ನು ಶೂಟ್ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ, ಸಾಹಸ ದೃಶ್ಯವೊಂದರಲ್ಲಿ ಭಾಗವಹಿಸು ತ್ತಿದ್ದಾಗ ಆಕಸ್ಮಿಕವಾಗಿ ಕಾರ್ತಿಕ್ ಅವರ ಮೊಣಕಾಲಿಗೆ ತೀವ್ರ ಪೆಟ್ಟಾಗಿದೆ. ತಕ್ಷಣವೇ ಚಿತ್ರತಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆ.


ವೈದ್ಯರ ಸಲಹೆಯಂತೆ ಕಾರ್ತಿಕ್ ಆರ್ಯನ್ ಅವರಿಗೆ ಶೀಘ್ರದಲ್ಲೇ ಮೊಣಕಾಲಿನ ಶಸ್ತ್ರಚಿಕಿತ್ಸೆ ನೆರವೇರಲಿದೆ. ಸರ್ಜರಿ ಬಳಿಕ ಅವರು ಕೆಲವು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಬೇಕಾಗಿದ್ದು, ಗುಣಮುಖರಾದ ನಂತರವೇ ಮತ್ತೆ ಬಣ್ಣದ ಲೋಕಕ್ಕೆ ಮರಳಲಿದ್ದಾರೆ. ಇತ್ತೀಚೆಗಷ್ಟೇ ’ಚಂದು ಚಾಂಪಿಯನ್ ಸಿನಿಮಾದ ಅತ್ಯುತ್ತಮ ನಟನೆಗಾಗಿ ’ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಪಡೆದು ಸಂಭ್ರಮದಲ್ಲಿದ್ದ ಕಾರ್ತಿಕ್ ಅವರಿಗೆ ಈ ಗಾಯ ಕೊಂಚ ಹಿನ್ನಡೆ ತಂದಿದೆ. ಜೊತೆಗೆ, ಈ ಹೊಸ ಸಿನಿಮಾದ ಮೂಲಕ ಅವರು ತಮ್ಮದೇ ’ಡೋಪಮೈನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದಾರೆ.


ನೆಚ್ಚಿನ ನಟನಿಗೆ ಗಾಯವಾದ ಸುದ್ದಿ ತಿಳಿಯುತ್ತಿದ್ದಂತೆ ಅವರ ಕೋಟ್ಯಂತರ ಅಭಿಮಾನಿಗಳು ಹಾಗೂ ಸಿನಿ ರಂಗದ ಗಣ್ಯರು ಕಾರ್ತಿಕ್ ಶೀಘ್ರ ಗುಣಮುಖರಾಗಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಾರೈಸುತ್ತಿದ್ದಾರೆ. ವಿಶ್ರಾಂತಿಯ ನಂತರ ಕಾರ್ತಿಕ್ ಆರ್ಯನ್ ಅವರು ಶ್ರೀಲೀಲಾ ಜೊತೆ ಅಭಿನಯಿಸುತ್ತಿರುವ ಅನುರಾಗ್ ಬಸು ಅವರ ನಿರ್ದೇಶನದ ಪ್ರೇಮಕಥೆಯ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ.