
ಶಹಾಬಾದ,ಆ.11-ಮಕ್ಕಳಲ್ಲಿ ಜಂತುಹುಳು ಬಾಧೆಯಿಂದ ಉಂಟಾಗುವ ರಕ್ತಹೀನತೆ ಹಾಗೂ ಅಪೌಷ್ಟಿಕತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಲ್ಬೆಂಡಜೋಲ್ ಮಾತ್ರೆ ಸೇವನೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಜಂತುಹುಳು ನಿವಾರಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಮುದಾಯ ಆರೋಗ್ಯ ಕೇಂದ್ರ ಶಹಾಬಾದದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ ಪಾಟೀಲ ಹೇಳಿದರು.
ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಶಹಾಬಾದ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳು ನಿವಾರಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಬೆಂಡಜೋಲ್ ಮಾತ್ರೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಅಗತ್ಯ ಔಷಧಗಳ ಪಟ್ಟಿಯಲ್ಲಿ ಸೇರಿಸಿದ್ದು, ಮಕ್ಕಳಿಗೆ ನಿಯಮಿತವಾಗಿ ಜಂತುಹುಳು ನಿವಾರಣ ಮಾತ್ರೆ ನೀಡುವುದರಿಂದ ಜಂತುಹುಳು ಬಾಧೆ, ರಕ್ತಹೀನತೆ ಹಾಗೂ ಅಪೌಷ್ಟಿಕತೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಶುದ್ಧ ನೀರು ಸೇವಿಸುವುದು, ಶೌಚಾಲಯ ಬಳಸಿದ ನಂತರ ಹಾಗೂ ಆಹಾರ ಸೇವಿಸುವ ಮುನ್ನ ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದು, ಬರಿಗಾಲಿನಲ್ಲಿ ಓಡಾಡದೆ ಪಾದರಕ್ಷೆಗಳನ್ನು ಧರಿಸುವುದು ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಂಕರ ರಾಥೋಡ್ ಮಾತನಾಡಿ, 1ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಪುಡಿ ಮಾಡಿ ನೀರಿನೊಂದಿಗೆ ಸೇವಿಸಲು ನೀಡಬೇಕು. 2ರಿಂದ 3 ವರ್ಷದ ಮಕ್ಕಳಿಗೆ ಒಂದು ಪೂರ್ಣ ಮಾತ್ರೆಯನ್ನು ಪುಡಿ ಮಾಡಿ ಸೇವಿಸಲು ನೀಡಬೇಕು. 3ರಿಂದ 19 ವರ್ಷದ ಮಕ್ಕಳಿಗೆ ಒಂದು ಪೂರ್ಣ ಮಾತ್ರೆಯನ್ನು ಚೆನ್ನಾಗಿ ಜಿಗಿದು ನೀರಿನೊಂದಿಗೆ ಸೇವಿಸುವಂತೆ ಮಾಡಬೇಕು ಎಂದು ತಿಳಿಸಿದರು.
ಮಕ್ಕಳು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದರ ಜೊತೆಗೆ ಶುದ್ಧ ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆ ಹಾಗೂ ಪರಿಸರ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಜಂತುಹುಳು ಬಾಧೆಯನ್ನು ಬಹುತೇಕ ತಡೆಗಟ್ಟಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಹದಿಹರೆಯದವರ ಆಪ್ತ ಸಮಾಲೋಚಕ ಅಮರೇಶ್ ಇಟಗಿಕರ್, ಶಹಾಬಾದ ನಗರ ವ್ಯಾಪ್ತಿಯ ಸುಮಾರು 53 ಶಾಲೆಗಳು ಹಾಗೂ 44 ಅಂಗನವಾಡಿ ಕೇಂದ್ರಗಳಲ್ಲಿ ಜಂತುಹುಳು ನಿವಾರಣ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಸುಮಾರು 9,980 ಮಕ್ಕಳಿಗೆ ಅಲ್ಬೆಂಡಜೋಲ್ ಮಾತ್ರೆ ಸೇವಿಸುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪರಮೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಯೂಸಫಸಾಬ್ ನಾಕೇದಾರ, ಹೆಚ್‍ಇಓ, ಕಾಲೇಜಿನ ಉಪನ್ಯಾಸಕ ವೃಂದ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.






























