
ಕಲಬುರಗಿ,ಆ.11: ಪತ್ನಿಯ ಮೇಲೆ ಸಂಶಯ ತಾಳಿ ಮನೆಯನ್ನು ಸ್ಫೋಟಿಸಿ ಸ್ಫೋಟಕ್ಕೆ ಸ್ವಂತ ಗಂಡನೇ ಬಲಿಯಾದ ಭೀಕರ ಘಟನೆ ಇಂದು ಬೆಳಿಗ್ಗೆ ಅಳಂದ ತಾಲೂಕು ಮಟಕಿ ತಾಂಡಾದಲ್ಲಿ ನಡೆದಿದೆ.
ಸೇವಾಲಾಲ ಬಳಿರಾಮ ರಾಠೋಡ ( 50) ಮೃತ ವ್ಯಕ್ತಿ. ಈತನ ಮಗಳು ಮೀರಾ ಸೇವಾಲಾಲ ರಾಠೋಡ ( 15)ಸಹ ಸ್ಫೋಟದಲ್ಲಿ ಜೀವ ಕಳೆದುಕೊಂಡಿದ್ದಾಳೆ.ಸ್ಫೋಟದ ತೀವ್ರತೆಗೆ ಮನೆ ಧ್ವಂಸವಾಗಿದ್ದು, ಮೃತ ದೇಹಗಳು ಛಿದ್ರವಾಗಿವೆ.
ಸೇವಾಲಾಲ ಬಳಿರಾಮ ರಾಠೋಡ ಕಲ್ಲುಗಣಿಯಲ್ಲಿ ಸ್ಫೋಟಕಗಳನ್ನು ಬ್ಲಾಸ್ಟ್ ಮಾಡುವ ಕೆಲಸ ಮಾಡುತ್ತಿದ್ದ.
ಇಂದು ಬೆಳಿಗ್ಗೆ 10.30 ರ ಸುಮಾರಿಗೆ ಸೇವಾಲಾಲ ಬಳಿರಾಮ ರಾಠೋಡ ಜಿಲೆಟಿನ್ ಕಡ್ಡಿಗಳನ್ನು ತಂದು ಮನೆಯಲ್ಲಿ ಸ್ಫೋಟ ಮಾಡಿದ್ದಾನೆ.
ಘಟನೆಯಲ್ಲಿ ಮನೆಯಲ್ಲಿದ್ದ ಪತ್ನಿ ಸವಿತಾ ( 40) ,ಮಗ ಪ್ರಕಾಶ ( 19) ನಾದಿನಿ ಸುರೇಖಾ ಕೃಷ್ಣ ಚವ್ಹಾಣ ( 30) ಮತ್ತು ಆಕೆಯ ಮಗ ವಿವೇಕ ಕೃಷ್ಣಾ ಚವ್ಹಾಣ ಎಂಬ ನಾಲ್ವರಿಗೆ ತೀವ್ರ ಗಾಯಗಳಾಗಿವೆ.
ಅಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.






























