
ಕಲಬುರಗಿ,ಆ.11: ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ,ಜಿಲ್ಲಾ ಪಂಚಾಯತ್, ಸಾಮಾಜಿಕ ಅರಣ್ಯ ವಿಭಾಗ, ಕೃಷಿ ಮಹಾವಿದ್ಯಾಲಯ ಹಾಗೂ ಸಹಾರಾ ಸೇವಾ ಸಂಸ್ಥೆ ಸಹಭಾಗಿತ್ವದಲ್ಲಿ “ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ”ಯನ್ನು ನಗರದ ಆಳಂದ ರಸ್ತೆಯಲ್ಲಿರುವ ಕೃಷಿ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿ ಸಮಾವೇಶಕ ಸಾಗರ್ ಎಸ್. ತಾವಡೆ ಕಲಬುರಗಿ ಅವರು ದೇಶದಲ್ಲಿ ಜೈವಿಕ ಇಂಧನ ಬಹಳಷ್ಟು ಇದ್ದು, ವಾಣಿಜ್ಯಕವಾಗಿ ವಾಹನಗಳ ಇಂಧನ ಕ್ಷೇತ್ರದಲ್ಲಿ ಬಳಕೆ ಹಂತ ಪ್ರಸ್ತುತ ತಲುಪುತ್ತಿದೆ ಎಂದರು. ಪೆಟ್ರೋಲಿಯಂ ಉತ್ಪನ್ನಗಳ ಜೊತೆಗೆ ಜೈವಿಕ ಇಂಧನ ಕರ್ನಾಟಕದಲ್ಲಿ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಇದರಿಂದ ವಾಯು ಮಾಲಿನ್ಯ ಕಡಿಮೆಯಾಗುತ್ತಿದೆ ಹಾಗೂ ಪರಿಸರ ಸ್ನೇಹಿ ವಾಹನಗಳ ಬಳಕೆ ಕಾರ್ಯರೂಪಕ್ಕೆ ಬರುತ್ತಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಎಮ್. ಎಸ್. ಜೋಗದ ಮಾತನಾಡಿ, ಜೈವಿಕ ಇಂಧನ ಕ್ಷೇತ್ರದಲ್ಲಿ ಕೃಷಿ, ಅರಣ್ಯ, ತಂತ್ರಜ್ಞಾನ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ವಿಪುಲ ಅವಕಾಶವಿದೆ. ಉತ್ತಮ ಪರಿಸರಕ್ಕಾಗಿ ಹಾಗೂ ಇಂಧನಕ್ಕಾಗಿ ಸಕ್ಕರೆ ಕಾರ್ಖಾನೆಗಳು ಕಬ್ಬು ಮತ್ತು ಮೆಕ್ಕೆಜೋಳದಿಂದ ಇಥೇನಾಲ್ ಉತ್ಪನ್ನ ಮಾಡತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ ಡೀನ್(ಕೃಷಿ)ಡಾ. ಬಿ. ಎಮ್. ದೊಡಮನಿ, ಅವರು ಮಾತನಾಡಿ, ಜೈವಿಕ ಇಂಧನ ಕ್ಷೇತ್ರ ಸಂಶೋಧನೆಗಾಗಿ ಕೃಷಿ ವಿಶ್ವವಿದ್ಯಾಲಯ, ರಾಯಚೂರು ಅಡಿಯಲ್ಲಿ ಬರುವ ತಿಂಥಣಿಯಲ್ಲಿ “ಜೈವಿಕ ಇಂಧನ ಉದ್ಯಾನವನ”ದಲ್ಲಿ ಉತ್ತಮ ಸಂಶೋಧನಾ ಕ್ಷೇತ್ರ ಹೊಂದಿದ್ದು, ಭವಿಷ್ಯದ ದೃಷ್ಟಿಯಲ್ಲಿ ಸಂಶೋಧನೆಗೆ ವಿಪುಲ ಅವಕಾಶಗಳಿವೆ ಎಂದರು. ಜೈವಿಕ ಇಂಧನದ ಸಸ್ಯಗಳಾದ ಹೊಂಗೆ ಮತ್ತು ಬೇವಿನ ಸಸಿಗಳನ್ನು ನೆಡಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುಳಾ ಎಸ್. ನಿಲಜಗಿ, ವಲಯ ಅರಣ್ಯಾಧಿಕಾರಿ ಸಂಜೀವ ಪವಾರ, ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ ಕುಮಾರ ನಿಪ್ಪಾಣಿ, , ತುಕ್ಕಪ್ಪಾ ಕಾಳೆ, ಮತ್ತು ಸಹಾರಾ ಸೇವಾ ಸಂಸ್ಥೆ, ನಿರ್ದೇಶಕಮಸ್ತಾನ ಬಿರಾದಾರ ಉಪಸ್ಥಿತರಿದ್ದರು.
ತೃತೀಯ ವರ್ಷದ ಕೃಷಿ ವಿದ್ಯಾರ್ಥಿನಿಯರಾದ ನವ್ಯಾ ಮತ್ತು ಪ್ರಗತಿ ಪ್ರಾರ್ಥನೆ ಗೀತೆ ಹಾಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಗುರುರಾಜ ಪಾಟೀಲ ಕಾರ್ಯಕ್ರಮ ನಿರೂಪಣೆ ಹಾಗೂ ಡಾ. ಗಜೇಂದ್ರ ಸಿ.. ವಿ. ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಸಂತೋಷಕುಮಾರ ನಿಪ್ಪಾಣಿ,ವಂದಿಸಿದರು.
ಶಿಕ್ಷಕರಾದ ಡಾ. ಎಸ್. ಬಿ. ಬೆಲ್ಲದ್, ಡಾ. ಬಿ. ಎಸ್. ರೆಡ್ಡಿ, ಡಾ. ಜಹೀರ ಅಹ್ಮದ್, ಡಾ. ಹಸನ್ ಖಾನ್, ಡಾ. ರಾಚಪ್ಪಾ ವಿ., ಡಾ. ಸಿದ್ಧರಾಮ ವಾಡೇದ್, ಡಾ. ಸ್ಟೀಫನ್‍ರಾಜ್, ಬೋಧಕೇತರ ಸಿಬ್ಬಂದಿ ಹಾಗೂ ಬಿ.ಎಸ್ಸಿ(ಕೃಷಿ) ವಿಭಾಗದ ತೃತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






























