Home Lead News ಮತ್ತೊಮ್ಮೆ ಸಂಪುಟ ವಿಸ್ತರಣೆ

ಮತ್ತೊಮ್ಮೆ ಸಂಪುಟ ವಿಸ್ತರಣೆ

ಬೆಂಗಳೂರು, ಆ. ೮- ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರನ್ನು ಸಮಾಧಾನಗೊಳಿಸಲು ಸಚಿವ ಸಂಪುಟವನ್ನು ಪುನಾರಚಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ಚಿಂತನೆ ನಡೆದಿದ್ದು, ಹೈಕಮಾಂಡ್ ಜತೆ ಸಮಾಲೋಚಿಸಿ ಸದ್ಯದಲ್ಲೇ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.


ಮತ್ತೊಮ್ಮೆ ಸಣ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರಸ್ ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಅಥವಾ ನಾಳೆ ದೆಹಲಿಗೆ ತೆರಳಲಿದ್ದಾರೆ.ವರಿಷ್ಠರನ್ನು ಭೇಟಿ ಮಾಡಿ ಎಲ್ಲದರ ಬಗ್ಗೆಯೂ ಚರ್ಚಿಸಿ ಮೂರನೇ ಹಂತದ ಸಂಪುಟ ವಿಸ್ತರಣೆ ನಿಗದಿ ಮಾಡುವುದರ ಜೊತೆಗೆ ಹಾಲಿ ಸಂಪುಟದಲ್ಲಿರುವ ಒಂದಿಬ್ಬರನ್ನು ಕೈ ಬಿಟ್ಟು ಅಸಮಾಧಾನಗೊಂಡಿರುವ ಹಿರಿಯ ಶಾಸಕರಿಬ್ಬರನ್ನು ಸಂಪುಟ ಸೇರ್ಪಡೆ ಹಾಗೆಯೇ ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ನಡೆಸುವರು.


ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಹಿರಿಯ ಶಾಸಕರನ್ನು ಸಮಾಧಾನಗೊಳಿಸುವ ಪ್ರಯತ್ನಗಳು ನಡೆದಿವೆಯಾದರೂ ಹಿರಿಯ ಶಾಸಕರು ಮುನಿಸು ತಣ್ಣಿದಿಲ್ಲ. ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಹಾಗಾಗಿ ಈಗ ರಚನೆಯಾಗಿರುವ ಸಂಪುಟದಲ್ಲಿ ಕೊಂಚ ಮಾರ್ಪಾಡು ಮಾಡಿ ಒಂದಿಬ್ಬರನ್ನು ಕೈ ಬಿಟ್ಟು ಅಸಮಾಧಾನಗೊಂಡಿರುವ ಹಿರಿಯ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಂಡು ಅಸಮಾಧಾನ, ಅತೃಪ್ತಿಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚಿಸುವರು.


ಸಚಿವ ಸ್ಥಾನ ಸಿಗದ ಹಿರಿಯ ಶಾಸಕರು ಅಸಮಾಧಾನಗೊಂಡಿರುವುದರಿಂದ ಹಾಗೂ ಸಚಿವ ಸ್ಥಾನ ಪಡೆದಿರುವ ಕೆಲ ಶಾಸಕರು ಇಂತಹದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿದಿರುವುದರಿಂದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿಲ್ಲ. ಎಲ್ಲವನ್ನು ಸರಿಪಡಿಸಲು ಹೈಕಮಾಂಡ್ ಜತೆ ಚರ್ಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.


ಇಂದು ಇಲ್ಲ ನಾಳೆ ಅವರು ದೆಹಲಿಗೆ ತೆರಳಿ ವರಿಷ್ಠರೊಡನೆ ಮಾತನಾಡಿ ಈಗಿರುವ ಸಚಿವ ಸಂಪುಟದಲ್ಲಿ ೩-೪ ಮಂದಿಯನ್ನು ಕೈಬಿಟ್ಟು ಅಸಮಾಧಾನಗೊಂಡಿರುವ ಹಿರಿಯರಿಗೆ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸುವರು.


ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್‌ನಲ್ಲಿ ನಡೆದಿರುವ ಬೆಳವಣಿಗೆಗಳು, ಖಾತೆ ಹಂಚಿಕೆಯ ಕಗ್ಗಂಟ್ಟು ಮತ್ತೊಮ್ಮೆ ಸಂಪುಟ ವಿಸ್ತರಿಸುವ ಅವಶ್ಯಕತೆ, ಎಲ್ಲದರ ಬಗ್ಗೆಯೂ ಡಿ.ಕೆ. ಶಿವಕುಮಾರ್ ರವರು ಹೈಕಮಾಂಡ್ ಜತೆ ಚರ್ಚೆ ನಡೆಸಿ ಒಂದು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಖಾತೆ ಹಂಚಿಕೆ ಕಗ್ಗಂಟು ಹಾಗೂ ಹಿರಿಯ ಶಾಸಕರ ಅಸಮಾಧಾನ ಶಮನ ಮಾಡುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅವರ ಜತೆಯೂ ಸುದೀರ್ಘ ಚರ್ಚೆ ನಡೆಸಿ ಬಿಕ್ಕಟ್ಟು ಶಮನದ ಮಾರ್ಗೋಪಾಯಗಳ ಬಗ್ಗೆ ಸಲಹೆಗಳನ್ನು ಪಡೆದುಕೊಂಡರು ಎಂದು ಹೇಳಲಾಗಿದೆ.


ಹಿರಿಯ ಶಾಸಕರ ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೆ ಹೊಸದಾಗಿ ಸಚಿವರಾಗಿರುವ ಎಚ್.ಸಿ. ಬಾಲಕೃಷ್ಣ ಅವರು ಹಿರಿಯರಿಗಾಗಿ ತಮ್ಮ ಸ್ಥಾನ ತ್ಯಜಿಸುವ ಮಾತುಗಳನ್ನಾಡಿದ್ದಾರೆ. ಹಾಗೆಯೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಹ ಪಕ್ಷ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿಯೂ ತಿಳಿಸಿದ್ದಾರೆ.
ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಹಾಲಿ ಸಂಪುಟದಲ್ಲಿರುವ ಇಬ್ಬರನ್ನು ಕೈ ಬಿಟ್ಟು ಹೊಸದಾಗಿ ಒಂದಿಬ್ಬರಿಗೆ ಅವಕಾಶ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿವೆ.ಮುಂದಿನ ಅಧಿವೇಶನದೊಳಗೆ ಮತ್ತೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳು ಇವೆ.


ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಾದ ಹೆಚ್.ಸಿ. ಮಹದೇವಪ್ಪ, ಯುವ ಶಾಸಕರಾಗಿರುವ ಪ್ರಿಯ ಕೃಷ್ಣ ಸೇರಿದಂತೆ ಹಲವರು ಈಗಾಗಲೇ ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿ ಮಾಡಿ ತಮಗಾಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಈಗಿನ ಸಚಿವ ಸಂಪುಟದಲ್ಲಿ ಕೆಲ ಮಾರ್ಪಾಡುಗಳಾಗುವ ಸಾಧ್ಯತೆಗಳು ಹೆಚ್ಚಿವೆ.

ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ : ಡಿಕೆಶಿ


ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುತ್ತೇವೆ.ಈ ಬಗ್ಗೆ ಕೇಂದ್ರ ಸಚಿವ ರಿಜಿಜು ತಲೆ ಕೆಡಿಸಿಕೊಳ್ಳುವುದು ಬೇಡ.ಅವರು ಅವರ ಪಕ್ಷದ ನೀತಿ ನಿಲುವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.


ಬೆಂಗಳೂರಿನಲ್ಲಿಂದು ದಿ.ಮುಖ್ಯಮಂತ್ರಿ ರಾಷ್ಟ್ರ ನಾಯಕ ಎಸ್ ನಿಜಲಿಂಗಪ್ಪ ಅವರ ಪುಣ್ಯ ಸ್ಮರಣೆ ದಿನವಾದ ಇಂದು ವಿಧಾನಸೌಧದ ಅವರಣದಲ್ಲಿರುವ ಎಸ್ .ನಿಜಲಿಂಗಪ್ಪ ಅವರ ಪ್ರತಿಮೆಗೆ ಪುಪ್ಪ ನಮನ ಸಲ್ಲಿಸಿ ಮಾತನಾಡಿ ಸಂಪುಟದಲ್ಲಿ ಮಹಿಳೆಯರು ಇದ್ದೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು,


ಕೇಂದ್ರ ಸಚಿವ ರಿಜಿಜು ಅವರು, ರಾಹುಲ್ ಗಾಂಧಿ ಮಹಿಳಾ ಮೀಸಲಾತಿ,ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ.ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳಾ ಸಚಿವರೇ ಇಲ್ಲ ಎಂದು ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಸಬಲೀಕರಣದಲ್ಲಿ ನಾವು ಹೆಚ್ಚು ಕೆಲಸ ಮಾಡಿದ್ದೇವೆ.ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದೇವೆ,ರಿಜಿಜು ಅವರು ಕಾಂಗ್ರೆಸ್ ಸರ್ಕಾರದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನಾವು ಎಲ್ಲವನ್ನು ಬಗೆಹರಿಸಿಕೊಳ್ಳುತ್ತೇವೆ ಎಂದರು.


ಕೆಲ ಸಚಿವರ ತ್ಯಾಗದ ಸೂತ್ರದ ಬಗ್ಗೆ ಪ್ರತಿಕ್ರಿಯಿಸದ ಡಿ.ಕೆ.ಶಿವಕುಮಾರ್ ಅವರು, ದೆಹಲಿಗೆ ತೆರಳುತ್ತಿದ್ದೀರಾ ಎಂಬ ಪ್ರಶ್ನೆಗೆ ,ನಾನು ದೆಹಲಿಗೆ ಹೋಗಬೇಕಾಲ್ಲ, ನಾನು ನಿಮಗೆ ಹೇಳಿಯೇ ಹೋಗುತ್ತೇನೆ ಎಂದು ಚುಟುಕಾಗಿ ಉತ್ತರಿಸಿ ದೆಹಲಿ ಭೇಟಿಯ ಗುಟ್ಟನ್ನು ಬಿಟ್ಟುಕೊಡಲಿಲ್ಲ.

ಕಾರ್ಯಕರ್ತರ ಹೆಸರಲ್ಲಿ ರಾಹುಲ್ ಗೆ ಪತ್ರ

ಸಂಪುಟ ವಿಸ್ತರಣೆಯ ಕಿಚ್ಚು ಕಾಂಗ್ರೆಸ್‌ನಲ್ಲಿ ವ್ಯಾಪಕವಾಗಿರುವಾಗಲೇ ನಿಷ್ಠಾವಂತ ಕಾರ್ಯಕರ್ತರ ಹೆಸರಿನಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರಿಗೆ ಪತ್ರ ಬರೆದು ಹೈಕಮಾಂಡ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೆಲವರು ರಾಜಕೀಯ ಲಾಭ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದನ್ನೆಲ್ಲಾ ಸರಿಪಡಿಸಿ ಎಂದು ನಿಷ್ಠಾವಂತ ಕಾರ್ಯಕರ್ತರು ರಾಹುಲ್ ರವರಲ್ಲಿ ಕೋರಿದ್ದಾರೆ.


ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದ ಬಳಿಕ ನಿಷ್ಠಾವಂತ ಕಾರ್ಯಕರ್ತರುಗಳು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ಗಾಂಧಿಯವರಿಗೆ ಬಹಿರಂಗ ಪತ್ರ ಬರೆದು ಈಗಿರುವ ಅಸಮಾಧಾನಗಳನ್ನು ಸರಿಪಡಿಸಿ, ನಿಷ್ಠಾವಂತರು ಮತ್ತು ಹಿರಿಯ ಶಾಸಕರುಗಳಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂದೆ ಭವಿಷ್ಯದಲ್ಲಿ ತೊಂದರೆಯಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.


ಸಂಪುಟ ವಿಸ್ತರಣೆಯಲ್ಲಿ ಪಕ್ಷಕ್ಕೆ ದುಡಿದ ಹಿರಿಯ ನಾಯಕರುಗಳನ್ನು ನಿರ್ಲಕ್ಷಿಸಲಾಗಿದೆ. ಪಕ್ಷಕ್ಕೆ ದ್ರೋಹ ಬಗೆದವರು ಮತ್ತು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರನ್ನು ಸಚಿವರನ್ನಾಗಿ ಮಾಡಿರುವುದು ದುರಾದೃಷ್ಟಕರ. ಇಂಥವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿ ಪಕ್ಷ ನಿಷ್ಠೆ ಹೊಂದಿರುವವರಿಗೆ ಸ್ಥಾನ ಕೊಡಿ ಎಂದು ನಿಷ್ಠಾವಂತ ಕಾರ್ಯಕರ್ತರು ರಾಹುಲ್‌ಗಾಂಧಿಯವರನ್ನು ಪತ್ರದಲ್ಲಿ ಕೋರಿದ್ದಾರೆ.