
ಕಲಬುರಗಿ,ಜು.30: ಜಿಲ್ಲೆಯ ಯಡ್ರಾಮಿ ತಾಲೂಕಿನ ವಸ್ತಾರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕಟ್ಟಡವು ಆರ್ಎಂಎಸ್ಎ ಯೋಜನೆಯಡಿ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಗ್ರಾಮದ ಹೊರ ವಲಯದಲ್ಲಿರುವ ಈ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಮಳೆ ಬಂದರೆ ಮಕ್ಕಳು ಶಿಕ್ಷಕರು ಪಾದರಕ್ಷೆಗಳನ್ನು ಕೈಯಲ್ಲಿ ಹಿಡಿದು ಶಾಲೆಗೆ ಹೊಗುವ ಪರಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಶಾಲೆಯ ಶಿಕ್ಷಕರು ಮಾತನಾಡುತ್ತಾ, ನಮ್ಮ ಶಾಲೆಗೆ ಬರುವ ರಸ್ತೆ ಸಂಪೂರ್ಣ ಹಾಳಾಗಿದೆ. ವಿಶೇಷವಾಗಿ ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗಿ ನೀರು ತುಂಬಿಕೊಳ್ಳುತ್ತದೆ. ಮಕ್ಕಳು ಶಾಲೆಗೆ ಬರಲು ತುಂಬಾ ಕಷ್ಟಪಡುತ್ತಾರೆ. ಅನೇಕ ವಿದ್ಯಾರ್ಥಿಗಳು ಚಪ್ಪಲಿಗಳನ್ನು ಕೈಯಲ್ಲಿ ಹಿಡಿದು, ಬರಿಗಾಲಿನಲ್ಲಿ ಕೆಸರಿನಲ್ಲಿ ನಡೆದು ಶಾಲೆಗೆ ಬರುತ್ತಾರೆ. ಶಿಕ್ಷಕರಿಗೂ ಇದೇ ಪರಿಸ್ಥಿತಿ. ಕೆಲವೊಮ್ಮೆ ಜಾರಿ ಬೀಳುವ ಅಪಾಯವೂ ಎದುರಾಗುತ್ತದೆ. ಇದರಿಂದ ಸಮಯಕ್ಕೆ ಶಾಲೆಗೆ ತಲುಪುವುದು ಕಷ್ಟವಾಗುತ್ತದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಹಾಳಾಗುವುದರಿಂದ ಕೆಲವು ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಾರೆ. ಇದರಿಂದ ಅವರ ವಿದ್ಯಾಭ್ಯಾಸಕ್ಕೂ ಅಡ್ಡಿಯಾಗುತ್ತಿದೆ. ಪೆÇೀಷಕರಿಗೂ ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಆತಂಕ ಉಂಟಾಗುತ್ತಿದೆ.ಶಿಕ್ಷಕರು ಹಾಗೂ ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಈ ಸಮಸ್ಯೆಯನ್ನು ತಂದಿದ್ದರೂ, ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಶಾಲೆಗೆ ಶೀಘ್ರವಾಗಿ ಡಾಂಬರು ಅಥವಾ ಸಿಮೆಂಟ್ ರಸ್ತೆ ನಿರ್ಮಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕರು ಮನವಿ ಮಾಡಿದ್ದಾರೆ ಎಂದು ಗುರುರಾಜ.ಕೆ.ಪಟ್ಟಣಶೆಟ್ಟಿ ಅವರು ತಿಳಿಸಿದ್ದಾರೆ.































