Home ಸುದ್ದಿ ರಾಷ್ಟ್ರೀಯ ಪಿಒಕೆಯಲ್ಲಿ ಗುಂಡಿನ ದಾಳಿ: ೩೦ಕ್ಕೂ ಹೆಚ್ಚು ಮಂದಿ ಬಲಿ

ಪಿಒಕೆಯಲ್ಲಿ ಗುಂಡಿನ ದಾಳಿ: ೩೦ಕ್ಕೂ ಹೆಚ್ಚು ಮಂದಿ ಬಲಿ

ಇಸ್ಲಾಮಾಬಾದ್/ನವದೆಹಲಿ:ಜು.೩೦- ಅಮಾಯಕ ಪ್ರತಿಭಟನಿರತ ನಾಗರಿಕರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ೩೦ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೃತಪಟ್ಟಿದ್ದು, ನೂರಾರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.


ದಾಳಿಯ ಬಳಿಕ ಹಲವು ಮೃತದೇಹಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದ್ದು, ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಪಿಒಕೆ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.


ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಶೇಹಬಾಝ್ ಶರೀಫ್ ನೇತೃತ್ವದ ಸರ್ಕಾರ ಹಾಗೂ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ವಿರುದ್ಧ ಸಾರ್ವಜನಿಕರ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾರಿ ಹಿಂಸಾಚಾರ ಭುಗಿಲೆದ್ದಿದೆ.


ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, ಪ್ರತಿಭಟನಾಕಾರರನ್ನು ಭಾರತಕ್ಕೆ ಹೋಲಿಸಿ “ಶತ್ರುಗಳು” ಎಂದು ಕರೆದಿದ್ದಾರೆ. “ಅವರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಶೇಹಬಾಝ್ ಶರೀಫ್ ಅವರ ವಿಶೇಷ ಸಲಹೆಗಾರ ರಾಣಾ ಸನಾವುಲ್ಲಾ ಖಾನ್ ಕೂಡ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದು, “ಪಾಕಿಸ್ತಾನ ಪೋಷಿಸಿದವರೇ ಈಗ ದೇಶಕ್ಕೆ ಸವಾಲು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಲಪ್ರಯೋಗ ಮಾಡುವುದು ಅನಿವಾರ್ಯ ಎಂದು ಹೇಳಿದ್ದಾರೆ.


ಪಿಒಕೆಯಲ್ಲಿ ’ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ ನೇತೃತ್ವದಲ್ಲಿ ಈ ಬೃಹತ್ ಜನಾಂದೋಲನ ನಡೆಯುತ್ತಿದೆ. ಪಿಒಕೆ ಶಾಸನಸಭೆಯ ೧೨ ಕಾಯ್ದಿರಿಸಿದ ಸ್ಥಾನಗಳನ್ನು ದುರ್ಬಳಕೆ ಮಾಡಿಕೊಂಡು ಇಸ್ಲಾಮಾಬಾದ್ ತನಗೆ ಬೇಕಾದ ಪ್ರಧಾನಿಯನ್ನು ನೇಮಿಸಿಕೊಳ್ಳುತ್ತಿದೆ ಎಂಬುದು ಪ್ರಮುಖ ಆರೋಪವಾಗಿದೆ. ಇದರೊಂದಿಗೆ ಕಳೆದ ಕೆಲವು ತಿಂಗಳುಗಳಿಂದ ಹೆಚ್ಚುತ್ತಿರುವ ಹಣದುಬ್ಬರ, ಆಡಳಿತಾತ್ಮಕ ನಿರ್ಲಕ್ಷ್ಯ, ರಾಜಕೀಯ ತಾರತಮ್ಯ ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿರುದ್ಧವೂ ಜನರು ಬೀದಿಗಿಳಿದಿದ್ದಾರೆ. ಈ ಪ್ರತಿಭಟನೆಗಳು ಈಗ ಪ್ರಜಾಪ್ರಭುತ್ವದ ಹಕ್ಕುಗಳು ಮತ್ತು ಆರ್ಥಿಕ ಪರಿಹಾರಕ್ಕಾಗಿ ನಡೆಯುತ್ತಿರುವ ಬೃಹತ್ ಚಳವಳಿಯಾಗಿ ಮಾರ್ಪಟ್ಟಿವೆ.


ಪಿಒಕೆಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, “ಇದು ಪಾಕಿಸ್ತಾನದ ದಶಕಗಳ ಕಾಲದ ಆರ್ಥಿಕ ಶೋಷಣೆ, ಮೂಲಭೂತ ಹಕ್ಕುಗಳ ನಿರಾಕರಣೆ ಮತ್ತು ಆಡಳಿತಾತ್ಮಕ ದಬ್ಬಾಳಿಕೆಯ ನೇರ ಪರಿಣಾಮ” ಎಂದು ಕಿಡಿಕಾರಿದೆ. ಪಿಒಕೆಯಲ್ಲಿ ಪಾಕಿಸ್ತಾನ ನಡೆಸಲು ಉದ್ದೇಶಿಸಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಪ್ರಸ್ತಾಪಿಸಿದ ಭಾರತ, ತನ್ನ ಅಕ್ರಮ ಆಕ್ರಮಣವನ್ನು ಸಿಂಧುಗೊಳಿಸಲು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮುಚ್ಚಿಹಾಕಲು ಪಾಕಿಸ್ತಾನ ಮಾಡುತ್ತಿರುವ ಯತ್ನ ಇದಾಗಿದೆ ಎಂದು ಟೀಕಿಸಿದೆ.


ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಪಿಒಕೆಯ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ್ದು, ಈ ವಿಷಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. “ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಈ ಪ್ರದೇಶಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಗ್ರಹಿಸಿ ಪರಿಹರಿಸಲು ನೆರವಾಗಬೇಕು. ಈ ಕುರಿತು ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವರು ಗಮನಹರಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.


ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಹಾಗೂ ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಕುರಿತು ಕನ್ನಡದಲ್ಲಿ ಹೆಚ್ಚಿನ ಮಾಹಿತಿಯನ್ನು ಈ ವೀಡಿಯೊ ಒದಗಿಸುತ್ತದೆ.