
ನವದೆಹಲಿ,ಜು.೩೦-ಇತ್ತೀಚಿನ ಹವಾಮಾನ ಮುನ್ಸೂಚನೆಯ ಪ್ರಕಾರ, ಜುಲೈ ೩೦ ರಿಂದ ಆಗಸ್ಟ್ ೪ ರವರೆಗೆ ದೇಶದ ಹಲವು ಭಾಗಗಳಲ್ಲಿ ಮಾನ್ಸೂನ್ ಮತ್ತಷ್ಟು ಚುರುಕುಗೊಳ್ಳಲಿದ್ದು, ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಉತ್ತರ, ಪೂರ್ವ, ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಭಾರತದ ಹಲವಾರು ರಾಜ್ಯಗಳಲ್ಲಿ ಈ ಅವಧಿಯಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಹಾಗೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಳದಿ ಎಚ್ಚರಿಕೆಯನ್ನು ಘೋಷಿಸಲಾಗಿದ್ದು, ಮೋಡ ಕವಿದ ವಾತಾವರಣದೊಂದಿಗೆ ಆಗಸ್ಟ್ ೪ ರವರೆಗೆ ಹಗುರದಿಂದ ಮಧ್ಯಮ ಹಾಗೂ ಕೆಲವು ಕಡೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅಲ್ಲಿ ತಾಪಮಾನವು ಗರಿಷ್ಠ ೩೩ಲಿಸಿಹಾಗೂ ಕನಿಷ್ಠ ೨೫ಲಿಸಿ ಆಸುಪಾಸಿನಲ್ಲಿರಲಿದೆ.
?ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು-ಕಾಶ್ಮೀರದಂತಹ ಪರ್ವತ ಪ್ರದೇಶಗಳಲ್ಲಿಯೂ ಭಾರಿ ಮಳೆಯಾಗುವ ಎಚ್ಚರಿಕೆ ಇದ್ದು, ಭೂಕುಸಿತ, ರಸ್ತೆ ತಡೆ ಹಾಗೂ ನದಿ-ಹೊಳೆಗಳಲ್ಲಿ ನೀರಿನ ಮಟ್ಟ ಹಠಾತ್ ಏರಿಕೆಯಾಗುವ ಅಪಾಯವಿರುವುದರಿಂದ ಪ್ರಯಾಣಿಕರು ಹಾಗೂ ಸ್ಥಳೀಯರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಇದಲ್ಲದೆ ಹರಿಯಾಣ, ಪಂಜಾಬ್, ಚಂಡೀಗಢ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲೂ ಮಳೆ ಆರ್ಭಟ ಮುಂದುವರಿಯಲಿದೆ. ಪೂರ್ವ ಮತ್ತು ಈಶಾನ್ಯ ಭಾರತದ ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ ಹಾಗೂ ತ್ರಿಪುರ ರಾಜ್ಯಗಳಲ್ಲೂ ಮುಂದಿನ ಕೆಲವು ದಿನಗಳು ಸಕ್ರಿಯ ಮಾನ್ಸೂನ್ ಮಳೆಯಾಗಲಿದೆ.
?ಪಶ್ಚಿಮ ಹಾಗೂ ದಕ್ಷಿಣ ಭಾರತದ ಕೊಂಕಣ-ಗೋವಾ, ಗುಜರಾತ್, ಮಹಾರಾಷ್ಟ್ರ, ಕೇರಳ, ಕರಾವಳಿ ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿಯೂ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಕೆಲವು ಪ್ರದೇಶಗಳಲ್ಲಿ ಗಂಟೆಗೆ ೫೦ ರಿಂದ ೬೦ ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಅಪಾಯಕಾರಿ ಗಾಳಿ ಬೀಸುವ ಲಕ್ಷಣಗಳಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಹವಾಮಾನ ಇಲಾಖೆ ಖಡಕ್ ಸೂಚನೆ ನೀಡಿದೆ. ಜನಸಾಮಾನ್ಯರು ನೀರು ನಿಲ್ಲುವ ಪ್ರದೇಶಗಳಿಂದ ದೂರವಿರಲು, ಸಿಡಿಲಿನ ಸಮಯದಲ್ಲಿ ತೆರೆದ ಜಾಗದಲ್ಲಿ ನಿಲ್ಲದಿರಲು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಿ ಸ್ಥಳೀಯ ಆಡಳಿತದ ಜಾಗರೂಕತಾ ಮಾರ್ಗಸೂಚಿಗಳನ್ನು ಪಾಲಿಸಲು ಕೋರಲಾಗಿದೆ.































