Home ಸಿನೆಮಾ ಟ್ರೇಲರ್ ಮೂಲಕ ಸದ್ದು ಮಾಡಿರುವ ‘ಪಿಚ್ಚರ್’

ಟ್ರೇಲರ್ ಮೂಲಕ ಸದ್ದು ಮಾಡಿರುವ ‘ಪಿಚ್ಚರ್’

ಆಗಸ್ಟ್ 7ರಂದು ಬಿಡುಗಡೆ

ಕನ್ನಡ ಹಾಗೂ ತುಳು ಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಪಿಚ್ಚರ್’ ಚಿತ್ರ ಟ್ರೇಲರ್ ಮತ್ತು ಹಾಡುಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದು, ಇದೀಗ ಆಗಸ್ಟ್ 7ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ವಿಭಿನ್ನ ಕೌಟುಂಬಿಕ ಮನರಂಜನಾ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುವುದರ ಜೊತೆಗೆ ಲಕ್ಷಾಂತರ ವೀಕ್ಷಣೆಗಳನ್ನು ದಾಖಲಿಸಿದೆ.

ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿಯ ಚಿತ್ರಗಳನ್ನು ನೀಡುತ್ತಿರುವ ನಿರ್ಮಾಪಕಿ ಶಿಲ್ಪಾ ಗಣೇಶ್ ಈ ಚಿತ್ರವನ್ನು ನಿರ್ಮಿಸಿದ್ದು, ಸಂದೀಪ್ ಬೆದ್ರ ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಕೌಟುಂಬಿಕ ಕಥೆ, ಹಾಸ್ಯ ಮತ್ತು ಮನರಂಜನೆಯನ್ನು ಸಮತೋಲನವಾಗಿ ಹೆಣೆದಿರುವ ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ.

ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ ನಾಯಕನಾಗಿ ಅಭಿನಯಿಸಿದ್ದು, ಅಮೃತ ಸುದು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಳು ಹಾಗೂ ಕನ್ನಡ ಚಿತ್ರರಂಗದ ಜನಪ್ರಿಯ ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ, ವಜ್ರಧೀರ್ ಜೈನ್, ಸದಾಶಿವ ಅಮಿನ್, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಪೂಜಾರ್, ಜಯಶೀಲ ಮರೊಲಿ ಹಾಗೂ ರೂಪ ವರ್ಕಾಡಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರದ ಛಾಯಾಗ್ರಹಣವನ್ನು ಸಂತೋಷ್ ರೈ ಪಾತಾಜೆ ಮತ್ತು ಚಂದ್ರಶೇಖರ್ ಕೆ.ಎಸ್. ನಿರ್ವಹಿಸಿದ್ದು, ರಾಜು ಆರ್ಯನ್ ಸಂಕಲನ ಮಾಡಿದ್ದಾರೆ. ಧನಂಜಯ್ ಬಿ. ಮತ್ತು ಶ್ರೀರಾಜು ನೃತ್ಯ ನಿರ್ದೇಶನ, ರಾಧೇಶ್ ಹಾಗೂ ಸಂತೋಷ್ ಪೂಜಾರಿ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕಿದೆ. ಮೋಹನ್ ಭಟ್ಕಳ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಸ್ಯಾಮುಯೆಲ್ ಅಭಿ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅವುಗಳಲ್ಲಿ ‘ಗೋಕುಲದ ರಾಧೆ’ ಹಾಡನ್ನು ನಿರ್ಮಾಪಕಿ ಶಿಲ್ಪಾ ಗಣೇಶ್ ಸ್ವತಃ ಹಾಡಿರುವುದು ಚಿತ್ರದ ಮತ್ತೊಂದು ವಿಶೇಷವಾಗಿದೆ.

ಈಗಾಗಲೇ ಟ್ರೇಲರ್ ಮೂಲಕ ಉತ್ತಮ ನಿರೀಕ್ಷೆ ಮೂಡಿಸಿರುವ ‘ಪಿಚ್ಚರ್’, ಮನರಂಜನೆ ಮತ್ತು ಹಾಸ್ಯದ ಸಂಗಮದೊಂದಿಗೆ ಆಗಸ್ಟ್ 7ರಂದು ಪ್ರೇಕ್ಷಕರ ಮುಂದೆ ಬರಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.