
ತಾಯಿ-ಮಗಳು ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ!
ಕನ್ನಡ ಚಿತ್ರರಂಗದಲ್ಲಿ ಹೊಸ ಕುತೂಹಲ ಮೂಡಿಸಿರುವ ‘ಬುಲ್ಲಿ’ ಚಿತ್ರದ ಮೂಲಕ ದಕ್ಷಿಣ ಭಾರತದ ಖ್ಯಾತ ನಟಿ ಊರ್ವಶಿ ಅವರ ಪುತ್ರಿ ತೇಜ ಊರ್ವಶಿ ನಾಯರ್ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಪಂಚಭಾಷಾ ತಾರೆ ಊರ್ವಶಿ ಮತ್ತು ಅವರ ಪುತ್ರಿ ತೇಜ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದು, ಈ ಬೆಳವಣಿಗೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಟ ಭುವನ್ ಪೊನ್ನಣ್ಣ ಮೊದಲ ಬಾರಿಗೆ ಔಟ್ ಅಂಡ್ ಔಟ್ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.
ರಾಂಧವ ಸಿನಿಮಾ ಬ್ಯಾನರ್ ಅಡಿಯಲ್ಲಿ, ಸಮೃದ್ಧ್ ಸ್ಟುಡಿಯೋಸ್ ಹಾಗೂ ಭುವನಂ ಎಂಟರ್ಟೈನ್ಮೆಂಟ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್ಕುಮಾರ್ ಸಮಾಧಿಗೆ ನಮನ ಸಲ್ಲಿಸುವ ಮೂಲಕ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಸುಮಾರು ಹತ್ತು ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಹಿರಿಯ ನಟಿ ಊರ್ವಶಿ ಮರಳಿದ್ದಾರೆ. “ಹಲವಾರು ಕನ್ನಡ ಸಿನಿಮಾಗಳ ಅವಕಾಶಗಳು ಬಂದರೂ ಮನಸ್ಸಿಗೆ ತಾಕುವ ಕಥೆ ಸಿಕ್ಕಿರಲಿಲ್ಲ. ಭುವನ್ ಮತ್ತು ಹರ್ಷಿಕಾ ಚಿತ್ರದ ಕಥೆಯನ್ನು ವಿವರಿಸಿದಾಗಲೇ ಇದೊಂದು ವಿಭಿನ್ನ ಪ್ರಯತ್ನ ಎನ್ನುವುದು ಗೊತ್ತಾಯಿತು. ಕನ್ನಡ ಚಿತ್ರರಂಗದೊಂದಿಗೆ ನನಗೆ ವಿಶೇಷ ನಂಟಿದ್ದು, ಇದೇ ಚಿತ್ರದಿಂದ ನನ್ನ ಮಗಳು ನಾಯಕಿಯಾಗಿ ಕನ್ನಡಕ್ಕೆ ಪರಿಚಯವಾಗುತ್ತಿರುವುದು ಇನ್ನಷ್ಟು ಸಂತಸ ತಂದಿದೆ” ಎಂದು ಹೇಳಿದರು.
ನಾಯಕ ಭುವನ್ ಪೊನ್ನಣ್ಣ ಮಾತನಾಡಿ, ಇದು ಡಾರ್ಕ್ ಕಾಮಿಡಿ ಶೈಲಿಯ ಮನರಂಜನಾ ಚಿತ್ರ. ಯಾವುದೇ ಸಂದೇಶ ಹೇಳುವ ಪ್ರಯತ್ನ ಇಲ್ಲ; ಸಂಪೂರ್ಣ ಮನರಂಜನೆಯ ಜೊತೆಗೆ ತಾಯಿ-ಮಗನ ಅಪರೂಪದ ಬಾಂಧವ್ಯವನ್ನು ಹೊಸ ರೀತಿಯಲ್ಲಿ ತೆರೆದಿಡುತ್ತದೆ. ನಾನು ‘ಬಲರಾಮ’ ಎಂಬ ಮಧ್ಯಮ ವರ್ಗದ ಜೆನ್-ಝೀ ಯುವಕನ ಪಾತ್ರದಲ್ಲಿ ನಟಿಸಿದ್ದೇನೆ. ಸ್ನೇಹಿತರು ‘ಬುಲ್ಲಿ’ ಎಂದು ಕರೆಯುವ ಕಾರಣ ಚಿತ್ರದ ಶೀರ್ಷಿಕೆಯೂ ಅದೇ ಆಗಿದೆ” ಎಂದರು.
ನಿರ್ದೇಶಕ ಅನೂಪ್ ಆಂಟೋನಿ, “ಇದು ನನ್ನ ನಿರ್ದೇಶನದ ನಾಲ್ಕನೇ ಸಿನಿಮಾ. ‘ರಾಮ ಶ್ಯಾಮ ಭಾಮ’ ಚಿತ್ರದ ಬಳಿಕ ಊರ್ವಶಿ ಅವರು ಮತ್ತೆ ಕನ್ನಡಕ್ಕೆ ಮರಳಿರುವುದು ನಮ್ಮ ತಂಡಕ್ಕೆ ಹೆಮ್ಮೆಯ ವಿಚಾರ. ಅಚ್ಯುತ್ ಕುಮಾರ್, ಓಂಪ್ರಕಾಶ್ ರಾವ್, ಪ್ರಕಾಶ್ ತುಮಿನಾಡು, ಹುಲಿ ಕಾರ್ತಿಕ್ ಹಾಗೂ ಆರ್ಯ ಸಂತೋಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಾರ್ಕ್ ಕಾಮಿಡಿಯ ಜೊತೆಗೆ ಭಾವನಾತ್ಮಕ ತಾಯಿ-ಮಗನ ಸಂಬಂಧವನ್ನು ಚಿತ್ರ ಕಟ್ಟಿಕೊಡಲಿದೆ” ಎಂದು ತಿಳಿಸಿದರು.
ನಟ ಓಂಪ್ರಕಾಶ್ ರಾವ್, ಊರ್ವಶಿ ಅವರೊಂದಿಗೆ ಅಭಿನಯಿಸಿರುವುದು ನನ್ನ ನಟ ಜೀವನದ ತೃಪ್ತಿದಾಯಕ ಅನುಭವಗಳಲ್ಲಿ ಒಂದಾಗಿದೆ. ಈ ಚಿತ್ರ ಪ್ರೇಕ್ಷಕರನ್ನು ಮನಸಾರೆ ರಂಜಿಸಲಿದೆ” ಎಂದರು.
ಕಾರ್ಯಕಾರಿ ನಿರ್ಮಾಪಕಿ ಹರ್ಷಿಕಾ ಪೂಣಚ್ಚ ಮಾತನಾಡಿ, “ಊರ್ವಶಿ ಅವರು ಹಲವು ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ. ತೇಜ ಅವರಿಗೆ ಬೇರೆ ಭಾಷೆಗಳಿಂದ ಅವಕಾಶಗಳಿದ್ದರೂ, ಕನ್ನಡ ಚಿತ್ರದ ಮೂಲಕ ನಾಯಕಿಯಾಗಿ ಪರಿಚಯವಾಗಲು ಒಪ್ಪಿಕೊಂಡಿರುವುದು ನಮಗೆ ಹೆಮ್ಮೆಯ ಸಂಗತಿ” ಎಂದರು.
ಕಾರ್ಯಕ್ರಮದಲ್ಲಿ ನಟ ಹುಲಿ ಕಾರ್ತಿಕ್, ಕಾರ್ಯಕಾರಿ ನಿರ್ಮಾಪಕ ನವೀನ್, ಆಕರ್ಶ್ ಹಾಗೂ ಬಾಲನಟ ಆರ್ಯ ಕೂಡ ಚಿತ್ರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.































