
ಪ್ರಿಯಾಂಕ ಉಪೇಂದ್ರ 50ನೇ ಚಿತ್ರದ ಟ್ರೇಲರ್ ಬಿಡುಗಡೆ
ನಟಿ ಪ್ರಿಯಾಂಕ ಉಪೇಂದ್ರ ಅಭಿನಯದ 50ನೇ ಚಿತ್ರ ‘ಡಿಟೆಕ್ಟಿವ್ ತೀಕ್ಷ್ಣ’ ಇದೀಗ ಟ್ರೇಲರ್ ಮೂಲಕ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಬೆಂಗಳೂರಿನ ಎಸ್ಆರ್ವಿ ಚಿತ್ರಮಂದಿರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿತು. ತ್ರಿವಿಕ್ರಮ ರಘು ನಿರ್ದೇಶಿಸಿರುವ ಈ ಥ್ರಿಲ್ಲರ್ ಚಿತ್ರಕ್ಕೆ ಗುತ್ತ ಮುನಿಪ್ರಸನ್ನ, ಜಿ. ಮುನಿ ವೆಂಕಟ್ಚರಣ್ ಹಾಗೂ ಪುರುಷೋತ್ತಮ್ ಬಿ.ಕೊಯ್ಯೂರು ನಿರ್ಮಾಪಕರಾಗಿದ್ದು, ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ನಂತರ ಮಾತನಾಡಿದ ಪ್ರಿಯಾಂಕ ಉಪೇಂದ್ರ, “ನನ್ನ ಸಿನಿ ಪಯಣದಲ್ಲಿ ಇಂತಹ ಉತ್ತಮ ಕಥೆಗಳು ಸಿಕ್ಕಿರುವುದು ನನ್ನ ಭಾಗ್ಯ. ಪ್ರತಿಯೊಬ್ಬ ಕಲಾವಿದೆಯೂ ಇಂತಹ ಪಾತ್ರಕ್ಕಾಗಿ ಕಾಯುತ್ತಿರುತ್ತಾರೆ. ಈ ಚಿತ್ರದಲ್ಲಿ ದೈಹಿಕ ಶಕ್ತಿಗಿಂತ ಬುದ್ಧಿವಂತಿಕೆಗೆ ಹೆಚ್ಚು ಮಹತ್ವ ನೀಡಲಾಗಿದೆ. ನನ್ನ ಪಾತ್ರವು ವಿಶೇಷವಾಗಿ ಹೆಣ್ಣುಮಕ್ಕಳು ಹಾಗೂ ಯುವಜನತೆಗೆ ಪ್ರೇರಣೆಯಾಗಲಿದೆ. ಇಂದಿನ ಸಮಾಜದಲ್ಲಿ ಭಾವನೆಗಳಿಗೆ ಕಡಿಮೆ ಬೆಲೆ ಸಿಗುತ್ತಿರುವುದು ಬೇಸರದ ಸಂಗತಿ. ಛಾಯಾಗ್ರಹಣ, ಕಲಾ ನಿರ್ದೇಶನ ಮತ್ತು ಸಂಗೀತ ಚಿತ್ರಕ್ಕೆ ಹಾಲಿವುಡ್ ಮಟ್ಟದ ಅನುಭವ ನೀಡಿವೆ. ಈ ವರ್ಷ ನನ್ನ ಮಗನ ಸಿನಿಮಾವೂ, ನನ್ನ ಸಿನಿಮಾವೂ ಬಿಡುಗಡೆಯಾಗುತ್ತಿರುವುದರಿಂದ ಸಂತಸ ದ್ವಿಗುಣವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ನಟ ಸಿದ್ಲಿಂಗು ಶ್ರೀಧರ್, ಅರುಣ್ ಬಾಲರಾಜ್, ವಿನ್ಸಿನ್ ಡಯಾಸ್, ರೋಬೋ ಗಣೇಶ್, ಶಶಿಧರ್, ಸಂಕಲನಕಾರ ಶ್ರೀಧರ್ ಸೇರಿದಂತೆ ಚಿತ್ರತಂಡದ ಸದಸ್ಯರು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು. ಪದಪಲ್ಲಿ ರೋಹಿತ್ ಸಂಗೀತ, ಮನು ದಾಸಪ್ಪ ಛಾಯಾಗ್ರಹಣ ಚಿತ್ರಕ್ಕಿದೆ. ಸುಗೂರು ಕುಮಾರ್ ವಿತರಣೆ ಮಾಡುತ್ತಿರುವ ‘ಡಿಟೆಕ್ಟಿವ್ ತೀಕ್ಷ್ಣ’ ಆಗಸ್ಟ್ ಮೊದಲ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಅಧಿಕಾರ, ಹಣಕ್ಕಿಂತ ಬುದ್ಧಿವಂತಿಕೆಯೇ ದೊಡ್ಡ ಶಕ್ತಿ ಎಂಬುದನ್ನು ಈ ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಒಬ್ಬ ವ್ಯಕ್ತಿ ತನ್ನ ಬುದ್ಧಿಶಕ್ತಿಯಿಂದ ಡಿಟೆಕ್ಟಿವ್ ಆಗಬಹುದು; ಅದೇ ಬುದ್ಧಿ ತಪ್ಪು ದಾರಿಗೆ ಹೋದರೆ ಅಪರಾಧಿಯಾಗಬಹುದು. ಈ ಎರಡು ಮನಸ್ಥಿತಿಗಳ ನಡುವಿನ ಬೌದ್ಧಿಕ ಪೈಪೋಟಿಯೇ ಚಿತ್ರದ ಪ್ರಮುಖ ಅಂಶ.
ಚಿತ್ರದ ಶೀರ್ಷಿಕೆಯನ್ನು ಉಪೇಂದ್ರ ಅವರು ಸೂಚಿಸಿದ್ದರು. ಮೂರು ತಲೆಮಾರುಗಳ ಕಥೆ ಇರುವುದರಿಂದ ವಿಶೇಷ ಸೆಟ್ಗಳನ್ನು ನಿರ್ಮಿಸಲು ಸಮಯ ಹಿಡಿಯಿತು. ಸೆನ್ಸಾರ್ ಮಂಡಳಿಯು ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ ಮೆಚ್ಚುಗೆ ವ್ಯಕ್ತಪಡಿಸಿದೆ” -ತ್ರಿವಿಕ್ರಮ ರಘು, ನಿರ್ದೇಶಕ































