Home ಮುಖಪುಟ ಸುದ್ದಿ ಇ೨೦ ಪೆಟ್ರೋಲ್ ಬಳಕೆಯಿಂದ ಎಂಜಿನ್ ಹಾನಿ,ಮೈಲೇಜ್ ಕುಸಿತ: ಪುರಾವೆ ಇಲ್ಲ.ಸಂಸತ್‌ಗೆ ತಿಳಿಸಿದ ಕೇಂದ್ರ

ಇ೨೦ ಪೆಟ್ರೋಲ್ ಬಳಕೆಯಿಂದ ಎಂಜಿನ್ ಹಾನಿ,ಮೈಲೇಜ್ ಕುಸಿತ: ಪುರಾವೆ ಇಲ್ಲ.ಸಂಸತ್‌ಗೆ ತಿಳಿಸಿದ ಕೇಂದ್ರ

ನವದೆಹಲಿ: ಇ೨೦ (ಶೇಕಡಾ ೨೦ರಷ್ಟು ಎಥನಾಲ್ ಮಿಶ್ರಿತ) ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್ ಹಾಳಾಗುತ್ತದೆ ಮತ್ತು ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತದೆ ಎಂಬ ಆರೋಪಗಳನ್ನು ಬೆಂಬಲಿಸಲು ಯಾವುದೇ ಅಧಿಕೃತ ಅಧ್ಯಯನ ಅಥವಾ ಪುರಾವೆಗಳಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

ಸಂಸತ್ತಿನಲ್ಲಿ ಎತ್ತಲಾದ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು, ಇ೨೦ ಇಂಧನ ಬಳಕೆಯಿಂದ ಎಂಜಿನ್‌ಗೆ ಹಾನಿಯಾಗುತ್ತದೆ ಎಂಬ ಸಾರ್ವಜನಿಕ ಭೀತಿಗೆ ಸೂಕ್ತ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಳೆಯ ಇ೧೦ ಮಾದರಿಯ ಇಂಧನಕ್ಕಾಗಿ ವಿನ್ಯಾಸಗೊಳಿಸಲಾದ ಕೆಲವು ವಾಹನಗಳಲ್ಲಿ ಇಂಧನ ಕಾರ್ಯಕ್ಷಮತೆ (ಮೈಲೇಜ್) ಶೇ. ೩ ರಿಂದ ೫ ರಷ್ಟು ಮಾತ್ರ ಕಡಿಮೆಯಾಗಬಹುದು ಎಂದು ಸರ್ಕಾರ ಒಪ್ಪಿಕೊಂಡಿದೆ. ಆದರೆ ಮೈಲೇಜ್ ವ್ಯತ್ಯಾಸಕ್ಕೆ ರಸ್ತೆ ರಸ್ತೆ ಪರಿಸ್ಥಿತಿ, ವಾಹನದ ನಿರ್ವಹಣೆ ಮತ್ತು ಚಾಲನಾ ಅಭ್ಯಾಸಗಳೂ ಕಾರಣವಾಗಿವೆ.
ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಸಾಗಣೆ ಮತ್ತು ಸೇವೆಯ ಅಂಕಿ-ಅಂಶಗಳ ಪ್ರಕಾರ, ಇ೨೦ ಬಳಕೆಯಿಂದ ಎಂಜಿನ್ ತುಕ್ಕು ಹಿಡಿಯುವುದು ಅಥವಾ ಬಿಡಿಭಾಗಗಳು ಬೇಗನೆ ಹಾಳಾಗುವಂತಹ ಯಾವುದೇ ತಾಂತ್ರಿಕ ತೊಂದರೆಗಳು ದಾಖಲಾಗಿಲ್ಲ.

ಸಾರ್ವಜನಿಕರ ಆತಂಕಕ್ಕೆ ಪ್ರತಿಕ್ರಿಯಿಸಿದ ಸರ್ಕಾರ, ಸರ್ಕಾರಿ ತೈಲ ಕಂಪನಿಗಳು ಮಾರಾಟ ಮಾಡುವ ಉನ್ನತ ಮಟ್ಟದ ’ಪ್ರೀಮಿಯಂ ಪೆಟ್ರೋಲ್’ನಲ್ಲಿ ಯಾವುದೇ ಇಥನಾಲ್ ಮಿಶ್ರಣ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.

ಇ೨೦ ಇಂಧನವು ಹೆಚ್ಚಿನ ಆಕ್ಟೇನ್ ರೇಟಿಂಗ್ ಹೊಂದಿದ್ದು, ವಾಹನದಿಂದ ಹೊರಸೂಸುವ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಇಂಧನ ಆಮದು ಪ್ರಮಾಣವನ್ನು ತಗ್ಗಿಸಲು ನೆರವಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಇಂಧನ ಪೂರೈಕೆ ಶೃಂಖಲೆಯನ್ನು ಕಾಯ್ದುಕೊಳ್ಳುವ ಸವಾಲುಗಳ ಹಿನ್ನೆಲೆಯಲ್ಲಿ ಹಳೆಯ ಇಥನಾಲ್-ರಹಿತ ಸಾಮಾನ್ಯ ಪೆಟ್ರೋಲ್ ಅನ್ನು ಮರಳಿ ತರುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವಾಲಯ ಪುನರುಚ್ಛರಿಸಿದೆ.