
ಬೆಂಗಳೂರು, ಜು.29- ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆಯಿಂದ 84,31,612 ಮತದಾರರ ಪಟ್ಟಿಯಿಂದ ಹೊರಗಿಡಲು ಗುರುತಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಆಯುಕ್ತ ಅನ್ಬುಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರತಿಯೊಬ್ಬ ಮತದಾರರನ ಸ್ಥಳ ಮಹಜರು ಮಾಡಲಾಗಿದ್ದು, ಮೃತರ ಪ್ರಮಾಣ ಪತ್ರ ಸಂಗ್ರಹಿಸಿ, ಸಂಬಂಧ ಪಟ್ಟವರಿಂದ ಸಹಿ ಕೂಡ ಪಡೆಯಲಾಗಿದೆ. 84 ಲಕ್ಷಕ್ಕೂ ಅಧಿಕ ಜನರನ್ನು ಮೊದಲ ಕರಡು ಪಟ್ಟಿಯಲ್ಲಿ ಪರಿಗಣಿಸುವುದಿಲ್ಲ ಎಂದು ತಿಳಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 1.3 ಕೋಟಿ ಮತದಾರರಿದ್ದಾರೆ. ಇದುವರೆಗೆ ಕೇವಲ 47.97 ಲಕ್ಷ ಜನ ಮಾತ್ರ ಅರ್ಜಿ ವಾಪಸ್ ಕೊಟ್ಟಿದ್ದಾರೆ. ಬರೋಬ್ಬರಿ 39.38 ಲಕ್ಷ (ಸುಮಾರು 40%) ಮತದಾರರ ಸುಳಿವೇ ಸಿಕ್ಕಿಲ್ಲ. ಇನ್ನೂ 16.57 ಲಕ್ಷ ಮತದಾರರು ಅರ್ಜಿ ವಾಪಸ್ ನೀಡಬೇಕಿದೆ ಎಂದು ಅಂಕಿ ಅಂಶ ನೀಡಿದರು.
ಅರ್ಜಿ ವಾಪಸ್ ಕೊಡದೇ ಇರುವವರು ಆಗಸ್ಟ್ 8ರ ಒಳಗಾಗಿ ಬಿಎಲ್‌ಒ ನೆರವು ಪಡೆದು ಅರ್ಜಿ ಸಲ್ಲಿಸಬೇಕು. ಸುಮಾರು 29 ಲಕ್ಷ ಮತದಾರರು 2002ರ ಮಾಹಿತಿ ಇಲ್ಲ ಎಂಬ ಕಾರಣಕ್ಕೆ ಅರ್ಜಿ ವಾಪಸ್ ಕೊಟ್ಟಿದ್ದಾರೆ. ಮಾಹಿತಿ ಇಲ್ಲದಿದ್ದರೂ ಬಿಎಲ್‌ಒಗಳ ನೆರವಿನಿಂದ ಅರ್ಜಿ ಸಲ್ಲಿಸಬಹುದು ಎಂದರು.
ಶಾಶ್ವತವಾಗಿ ಸ್ಥಳಾಂತರಗೊಂಡ 51.74 ಲಕ್ಷ ಮತದಾರರು ಪ್ರಸ್ತುತ ಕರ್ನಾಟಕದ ಯಾವುದೇ ಕ್ಷೇತ್ರದಲ್ಲಿ ವಾಸವಿದ್ದು, ದೇಶದ ಬೇರೆಲ್ಲೂ ಮತ ಹೊಂದಿರದಿದ್ದರೆ ಫಾರ್ಮ್-6 ಮೂಲಕ ಸೂಕ್ತ ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಕರ್ನಾಟಕದಲ್ಲಿ ವಾಸ ಮಾಡುತ್ತಿರುವುದಕ್ಕೆ ಸೂಕ್ತವಾದ ದಾಖಲೆ ಸಲ್ಲಿಸದರೆ ಅವರ ಹೆಸರನ್ನು ಪರಿಗಣಿಸಲಾಗುತ್ತದೆ. ಇಲ್ಲವಾದರೆ ಅಂತಿಮ ಪಟ್ಟಿಯಿಂದಲೂ ಅವರನ್ನು ಹೊರಗಿಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಎಸ್‌ಐಆರ್ ಪ್ರಗತಿ
ವಿತರಿಸಲಾದ ಎನ್ಯೂಮರೇಷನ್ ಫಾರ್ಮ್‌ಗಳು: 5,54,32,314
ವಾಪಸ್ ಸ್ವೀಕರಿಸಿದ ಅರ್ಜಿಗಳು: 4.26 ಕೋಟಿ (4,26,75,861 ಡಿಜಿಟಲೀಕರಣ ಪೂರ್ಣ)
ಪ್ರಸ್ತುತ ಪ್ರಗತಿ: 76.99%
ಇನ್ನೂ ಮಾಹಿತಿ ಸಿಗದ ಮತದಾರರು: 43,24,841
ಆನ್‌ಲೈನ್ ಅರ್ಜಿಗಳು: 3.22 ಲಕ್ಷ
ಫಾರ್ಮ್ 6ಎ ಅರ್ಜಿಗಳು: 2,283
ಫಾರ್ಮ್ 7 ಅರ್ಜಿಗಳು: 7.73 ಲಕ್ಷ






























