
ಕಲಬುರಗಿ,ಜು.23-ನಗರದ ಕೋರಂಟಿ ಹನುಮಾನ ದೇವಸ್ಥಾನಕ್ಕೆ ಹೋಗುವ ರಸ್ತೆಯ ಸರ್ಕಾರಿ ಜಾಗದಲ್ಲಿರುವ ನೀರಿನ ಟ್ಯಾಂಕಿನ್ ಕೆಳಗಡೆ ಅಕ್ರಮವಾಗಿ ಮತ್ತು ಕಾನೂನುಬಾಹಿರವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪಿಎಸ್ಐ ಇಂದರವ್ವ, ಎಎಸ್ಐ ಶಿವಶರಣಪ್ಪ, ಸಿಬ್ಬಂದಿ ಪ್ರಭಾಕರ ಅವರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ನಗರದ ತಾರಫೈಲ್ ಬಡಾವಣೆಯ ಇರಾನಿ ಗಲ್ಲಿಯ ಸಾದಿಕ್ ಹುಸೇನ್ (36) ಎಂಬಾತನನ್ನು ಬಂಧಿಸಿ ಬೈಕ್, ಗಾಂಜಾ ಸೇರಿ 1,05600 ರೂ.ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ. ಬೀದರ್ ನಗರದ ಇರಾನಿ ಗಲ್ಲಿಯ ಅಪರಿಚಿತ ವ್ಯಕ್ತಿ ಮತ್ತು ಈತ ಸೇರಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಸಾದಿಕ್ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































