
ಬೆಂಗಳೂರು,ಜು.೨೩: ಕೆಪಿಸಿಸಿ ಕಚೇರಿ ಬಳಿ ನಿನ್ನೆ ಬಿಜೆಪಿ ಶಾಸಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕರುಗಳಾದ ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಶಾಸಕರುಗಳು ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು
ಕೆಪಿಸಿಸಿ ಕಚೇರಿ ಬಳಿ ನಿನ್ನೆ ಪ್ರತಿಭಟನೆಗೆ ಮುಂದಾಗಿದ್ದ ಕೊತ್ವಾಲ್ ರಾಮಚಂದ್ರ ಶಿಷ್ಯರಾದ ಕಾಂಗ್ರೆಸ್ಸಿಗರು ನಮ್ಮ ಶಾಸಕರ ಮೇಲೆ ಹಲ್ಲೆ ಮಾಡಿದ್ದಾರೆ.
ಕಾಂಗ್ರೆಸ್ನದು ಗೂಂಡಾ ಸಂಸ್ಕೃತಿ ಎಂದು ಪ್ರತಿಭಟನಾ ನಿರತ ಶಾಸಕರು ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕೊತ್ವಾಲ್ ಸರ್ಕಾರಕ್ಕೆ ಧಿಕ್ಕಾರ, ಗುಂಡಾ ಸರ್ಕಾರ ಎಂಬ ಘೋಷಣೆಗಳನ್ನು ಬಿಜೆಪಿ ಶಾಸಕರು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯದಲ್ಲಿ ಗುಂಡೂ ಸರ್ಕಾರ, ಕೊತ್ವಾಲ್ ಶಿಷ್ಯಂದಿರ ಸರ್ಕಾರ ಇದೆ. ಈ ಸರ್ಕಾರ ಹೀಗೆ ಮುಂದುವರೆದರೆ ಬೀದಿ ಬೀದಿಗಳಲ್ಲಿ ಅಫ್ತಾ ವಸೂಲಿ ಮಾಡುತ್ತಾರೆ ಎಂದು ಕಿಡಿಕಾರಿದರು.
ಗೂಂಡಾ ಸರ್ಕಾರದ ಲೀಡರ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇವರಿಬ್ಬರೂ ಒಂದೇ ಕಡೆ ತರಬೇತಿ ಪಡೆದವರು. ದೆಹಲಿಯಲ್ಲಿ ರಾಹುಲ್ಗಾಂಧಿ ದಾರಿ ತಪ್ಪಿದ್ದರೆ, ರಾಜ್ಯದಲ್ಲಿ ಇವರಿಬ್ಬರೂ ದಾರಿ ತಪ್ಪಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕರ ಮೇಲೆ ನಿನ್ನೆ ಮೊಟ್ಟೆ ಎಸೆದು, ಹಲ್ಲೆ ಮಾಡಲಾಗಿದೆ. ಇದೊಂದು ಗೂಂಡಾ ಸರ್ಕಾರ ಎಂದು ಅವರು ದೂರಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿಗರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇಳುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಹಲವು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗ ಕಾಂಗ್ರೆಸ್ ನಾಯಕರು ರಾಜೀನಾಮೆ ಕೊಟ್ಟರಾ ಎಂದು ಪ್ರಶ್ನಿಸಿದರು.
ವಿಧಾನಪರಿಷತ್ನ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಮಕೃಷ್ಣಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ ಕೊತ್ವಾಲ್ ರಾಮಚಂದ್ರ ಅವರನ್ನು ಹೊಡೆಯಲು ಮಚ್ಚು ತಂದಿದ್ದನಂತೆ. ಈಗ ಅವನ ಶಿಷ್ಯಂದಿರೇ ವಿಧಾನಸೌಧದಲ್ಲಿ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿ, ಕೊತ್ವಾಲ್ ಸಂಸ್ಕೃತಿಯನ್ನೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮುಂದುವರೆಸಿದ್ದಾರೆ ಎಂದು ದೂರಿದರು.
ರಾಹುಲ್ಗಾಂಧಿ ಅವರು ವಿದೇಶಕ್ಕೆ ಹೋಗಿ ಬಂದ ಮೇಲೆ ದೇಶಕ್ಕೆ ಗಂಡಾಂತರ ತಂದಿದ್ದಾರೆ. ಅವರು ಕಾಕ್ರೋಚ್ ಲೀಡರ್ ಆಗಿದ್ದಾರೆ ಎಂದು ವ್ಯಂಗ್ಯವಾಡಿ, ರಾಹುಲ್ ಬೇರೆಯವರು ಜತೆ ಸೇರಿ ಚಿತಾವಣೆ ಮಾಡುತ್ತಿದ್ದಾರೆ. ಕರ್ನಾಟಕದ ಕಾಂಗ್ರೆಸ್ನಲ್ಲೂ ಗುಂಡೂ ಸಂಸ್ಕೃತಿ ಮೇಳೈಸಿದೆ. ನಮ್ಮ ಮೇಲೆ ಮೊಟ್ಟೆ ಎಸೆದಿದ್ದಾರೆ, ಹಲ್ಲೆ ಮಾಡಿದ್ದಾರೆ. ಈ ರೀತಿ ಮಾಡಲು ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರು ಆದೇಶ ಮಾಡಿದ್ದರು ಎಂದು ಆರೋಪಿಸಿದರು.
ಕೆಪಿಸಿಸಿ ಕಚೇರಿಗೆ ಮೊಟ್ಟೆಗಳನ್ನು ಏಕೆ ತಂದರು, ಆಮ್ಲೇಟ್ ಮಾಡಲಾ, ಕೆಪಿಸಿಸಿ ಕಚೇರಿಯೇನೂ ಕೋಳಿ ಫಾರಾಂ, ಇಲ್ಲಾ ಮಿಲ್ಟ್ರಿ ಹೋಟೆಲಾ ಎಂದು ವಾಗ್ದಾಳಿ ನಡೆಸಿದರು.
ಇಂದಿನ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಸೇರಿದಂತೆ ಬಿಜೆಪಿಯ ವಿಧಾನಸಭೆ ಸದಸ್ಯರು ಮತ್ತು ವಿಧಾನಪರಿಷತ್ ಸದಸ್ಯರು, ಮುಖಂಡರುಗಳು ಭಾಗವಹಿಸಿದ್ದರು.































