
ಬೆಂಗಳೂರು, ಜು. ೮- ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿ ಗಣತಿ ಸಮೀಕ್ಷಾ ವರದಿಯನ್ನು ಬಹಿರಂಗಗೊಳಿಸುವಂತೆ ಬಿಜೆಪಿ ಆಗ್ರಹಿಸಿದೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸುನೀಲ್ಕುಮಾರ್, ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವ ಬೈರತಿ ಬಸವರಾಜು ಇವರುಗಳು, ಹಿಂದುಳಿದ ವರ್ಗಗಳ ಆಯೋಗ ಜಾತಿ ಗಣತಿ ವರದಿ ಸಲ್ಲಿಸಿ ಒಂದು ತಿಂಗಳು ಕಳೆದಿದೆ. ಸರ್ಕಾರ ಈ ವರದಿಯನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಹಿಂದುಳಿದ ವರ್ಗಗಳ ಆಯೋಗ ಸುಮಾರು ೪೫೦ ಕೋಟಿಗೂ ಹೆಚ್ಚು ಖರ್ಚು ಮಾಡಿ ಈ ಜಾತಿ ಗಣತಿ ವರದಿಯನ್ನು ಸಿದ್ದಪಡಿಸಿದೆ. ಈ ವರದಿ ಏನಾಗಿದೆಯೋ ಗೊತ್ತಿಲ್ಲ. ಹಾಗಾಗಿ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಕುತೂಹಲ ನಮಗೂ ಇದೆ. ಹೀಗಾಗಿ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿದ್ದ ಮಧುಸೂಧನ್ ನಾಯಕ್ ನೇತೃತ್ವದ ಜಾತಿ ಗಣತಿ ವರದಿಯನ್ನು ಬಹಿರಂಗಪಡಿಸಿ ಎಂದು ಸುನೀಲ್ಕುಮಾರ್ ಒತ್ತಾಯಿಸಿದರು.
ಈ ಹಿಂದೆ ಜಾತಿ ಗಣತಿ ವರದಿಗೆ ಸರ್ಕಾರ ಮುಂದಾದಾಗ ಕೇಂದ್ರ ಸರ್ಕಾರವೇ ಜಾತಿ ಗಣತಿ ಮಾಡುತ್ತಿದೆ. ಈ ಸಮೀಕ್ಷೆ ಅಗತ್ಯವಿಲ್ಲ ಎಂದು ಹೇಳಿದ್ದೆವು. ಆದರೂ ಆಯೋಗ ಸಮೀಕ್ಷೆ ನಡೆಸಿದೆ. ಸಮೀಕ್ಷಾ ವರದಿ ಸರ್ಕಾರದ ಕೈ ಸೇರಿದೆ. ವರದಿಗಳ ಸ್ಪಷ್ಟತೆ ಬೇಕು. ಹಾಗಾಗಿ ಜಾತಿ ಗಣತಿ ವರದಿಯನ್ನು ಬಹಿರಂಗಪಡಿಸಿ ಎಂದು ಅವರು ಆಗ್ರಹಿಸಿದರು.
ಈ ಹಿಂದೆ ಕಾಂತರಾಜು ವರದಿ, ಜೈಪ್ರಕಾಶ್ ವರದಿ ಎಲ್ಲವೂ ಕಾಂಗ್ರೆಸ್ ಹೈಕಮಾಂಡ್ನಿಂದಾಗಿ ಕಸದ ಬುಟ್ಟಿ ಸೇರಿವೆ. ಈ ವರದಿ ಶೈತ್ಯಾಗಾರ ಸೇರುವ ಮೊದಲು ವರದಿಯ ಬಗ್ಗೆ ನಾಡಿನ ಜನರ ಗಮನಕ್ಕೆ ತರಬೇಕಿದೆ ಎಂದು ಅವರು ಒತ್ತಾಯಿಸಿದರು.






























