Home ಮುಖಪುಟ ಸುದ್ದಿ ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆ

ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆ

ಪ್ರಿಯಾಂಕ್ ಆರೋಪ

ಬೆಂಗಳೂರು, ಜು. ೮- ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಎಸ್‌ಐಆರ್ ವಿಚಾರವಾಗಿ ಬಿಜೆಪಿ-ಜೆಡಿಎಸ್ ನಿನ್ನೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಹಿಂದೆಯೇ ದೆಹಲಿಗೆ ಹೋಗಿ ಆಯುಕ್ತರ ಭೇಟಿಗೆ ಕಾಲಾವಕಾಶ ಕೋರಿದ್ದೆ. ಆದರೆ ಅವಕಾಶ ಸಿಗಲಿಲ್ಲ. ಬಿಜೆಪಿ-ಜೆಡಿಎಸ್ ಹೇಳಿದ ತಕ್ಷಣ ಆಯೋಗ ಸ್ಪಂದಿಸುತ್ತದೆ ಎಂದು ದೂರಿದರು.


ಕೇಂದ್ರ ಚುನಾವಣಾ ಆಯೋಗ ನಮ್ಮ ಸಲಹೆಗಳಿಗೆ ಹೇಗೆ ಸ್ಪಂದಿಸುತ್ತದೆ, ಬಿಜೆಪಿ-ಜೆಡಿಎಸ್ ಸಲಹೆಗಳಿಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ನೋಡಿದರೆ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂಬುದು ಗೊತ್ತಾಗುತ್ತದೆ ಎಂದರು.


ನಾವು ಈ ಹಿಂದೆಯೇ ಕೇಂದ್ರ ಚುನಾವಣಾ ಆಯೋಗಕ್ಕೆ ೧೨ ವಿಚಾರಗಳನ್ನು ಗಮನಕ್ಕೆ ತಂದಿದ್ದೆವು. ವೈಜ್ಞಾನಿಕವಾಗಿ, ಸಾಂವಿಧಾನಿಕವಾಗಿ ಮತದಾರರ ಹಕ್ಕನ್ನು ರಕ್ಷಣೆ ಮಾಡಬೇಕು ಎಂದು ಕೇಳಿದ್ದೆವು. ಆದರೆ ಇದ್ಯಾವುದಕ್ಕೂ ಆಯೋಗದಿಂದ ಉತ್ತರ ಬಂದಿಲ್ಲ ಎಂದರು.
ಈಗ ಬಿಜೆಪಿ ಮತ್ತು ಜೆಡಿಎಸ್ ಆಯೋಗಕ್ಕೆ ದೂರು ನೀಡಿವೆ. ಅವರ ದೂರಿಗೆ ಏನು ಮಾಡುತ್ತಾರೆ ನೋಡೋಣ ಎಂದರು.


ಪಶ್ಚಿಮ ಬಂಗಾಳದಲ್ಲೂ ಎಸ್‌ಐಆರ್ ಪ್ರಕ್ರಿಯೆ ಆರಂಭವಾದಾಗ ಪ್ರತಿಭಟನೆ ಮಾಡಿದ್ದು ಬಿಜೆಪಿಯೇ. ಬಿಎಲ್‌ಓಗಳು ಮಮತಾ ಬ್ಯಾನರ್ಜಿಯವರ ಕಪಿಮುಷ್ಠಿಯಲ್ಲಿದ್ದಾರೆ ಎಂದು ಆರೋಪ ಮಾಡಿ, ದೂರು ಕೊಟ್ಟು, ಆ ಮೇಲೆ ನಿಯಮಗಳನ್ನು ಜಾರಿ ಮಾಡಿದರು. ಇದೆಲ್ಲಾ ಬಿಜೆಪಿಯವರ ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸಿಜರ್ ಎಸ್‌ಒಪಿ. ಅವರು ಒಡೆದಂಗೆ ಮಾಡುವುದು, ಇವರು ಅತ್ತಂಗೆ ಮಾಡುವುದು ಇಷ್ಟೇ ಎಂದು ವಾಗ್ದಾಳಿ ನಡೆಸಿದರು.
ಬಿಎಲ್‌ಓಗಳನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಬಿಜೆಪಿ-ಜೆಡಿಎಸ್ ಆರೋಪ ಮಾಡಿದ್ದಾರೆ. ಹೇಗೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಏನನ್ನು ಹೇಳುತ್ತಿಲ್ಲ ಎಂದು ಟೀಕಿಸಿದರು.


ಕೆಲವು ಬಿಎಲ್‌ಓಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಿರುವ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ದೂರು ಕೊಡಲಿ ನಾವು ತನಿಖೆ ಮಾಡಿಸುತ್ತೇವೆ ಎಂದರು.
ಬರ ಘೋಷಣೆ ನಮ್ಮ ಜವಾಬ್ದಾರಿಯಲ್ಲ, ಕೇಂದ್ರ ಸರ್ಕಾರದ್ದು. ಕೇಂದ್ರ ಸರ್ಕಾರ ಮಾನದಂಡಗಳ ಪ್ರಕಾರವೇ ವರದಿ ಸಲ್ಲಿಸಬೇಕು. ಆ ವರದಿ ಆಧರಿಸಿ ಕೇಂದ್ರ ಅಧ್ಯಯನ ತಂಡ ಇಲ್ಲಿಗೆ ಬಂದು ವಸ್ತುಸ್ಥಿತಿ ಅಧ್ಯಯನ ಮಾಡಿ ವರದಿ ಕೊಡುತ್ತದೆ. ನಂತರ ಬರ ಘೋಷಣೆಯಾಗುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ಬರ ಪರಿಸ್ಥಿತಿಯ ಘೋಷಣೆ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಪ್ರತಿ ಜಿಲ್ಲೆ, ತಾಲ್ಲೂಕಿಗೆ ಹೋಗಿ ಪರಿಶೀಲನೆ ಮಾಡಿ ವರದಿ ತಯಾರು ಮಾಡುತ್ತೇವೆ. ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರವೇ ವರದಿ ಸಲ್ಲಿಸಬೇಕು. ವರದಿ ಕೊಡುವುದು ನಮ್ಮ ಜವಾಬ್ದಾರಿ. ಪರಿಹಾರ ಘೋಷಣೆ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಅವರು ಹೇಳಿದರು.


ಬೆಳಗಾವಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಖಾಸಗಿ ಕಾರ್ಯಕ್ರಮ. ನಮ್ಮ ಅನುಮತಿ ಬೇಕಿಲ್ಲ. ಬೀದಿಗಿಳಿದು ಮೆರವಣಿಗೆ ಮಾಡಬೇಕಾದರೆ ನಮ್ಮ ಅನುಮತಿ ಬೇಕಾಗುತ್ತದೆ. ಬೀದಿಗಿಳಿದು ಮೆರವಣಿಗೆ ಮಾಡುವಾಗ ನಮ್ಮ ಅನುಮತಿ ಕೇಳುತ್ತಾರೆ. ಕಾನೂನು ಸುವ್ಯವಸ್ಥೆ ಎಲ್ಲವನ್ನು ನೋಡಿಕೊಂಡು ನಾವು ಅನುಮತಿ ಕೊಡುತ್ತೇವೆ. ಇಲ್ಲದಿದ್ದರೆ ಮುಂದೂಡಿ ಎಂದು ಹೇಳುತ್ತೇವೆ ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ಪೂರ್ಣ ಪ್ರಮಾಣದ ಸಂಪುಟ ಇದ್ದರೆ ಉತ್ತಮವಾಗಿ ಕೆಲಸ ಮಾಡಲು ಸಾಧ್ಯ ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತಿದೆ. ಎಲ್ಲವೂ ಆದಷ್ಟು ಬೇಗ ಆಗುತ್ತದೆ ಎಂದು ಅವರು ಹೇಳಿದರು.