
ಬೆಂಗಳೂರು, ಜು. ೮: ಫುಟ್‌ಪಾತ್ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಸಾವಿರಾರು ಬೀದಿಬದಿ ವ್ಯಾಪಾರಿಗಳು ಇಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರ ಹಾಗೂ ಜಿಬಿಎ ವಿರುದ್ಧ ಘೋಷಣೆಗಳನ್ನು ಕೂಗಿ, ತೆರವು ಕಾರ್ಯಾಚರಣೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಪಾದಚಾರಿ ಮಾರ್ಗ ತೆರವು ಹೆಸರಿನಲ್ಲಿ ತಮ್ಮ ಜೀವನೋಪಾಯವನ್ನು ಕಸಿಯಲಾಗುತ್ತಿದೆ ಎಂದು ವ್ಯಾಪಾರಿಗಳು ಆರೋಪಿಸಿದರು. ನಗರದಲ್ಲಿ ಸುಮಾರು ೧.೫ ಲಕ್ಷ ಬೀದಿಬದಿ ವ್ಯಾಪಾರಿಗಳ ಭವಿಷ್ಯ ಆತಂಕದಲ್ಲಿದ್ದು, ಸಮಗ್ರ ಸಮೀಕ್ಷೆ ಪೂರ್ಣಗೊಳ್ಳುವ ಮುನ್ನ ತೆರವು ಕಾರ್ಯಾಚರಣೆ ನಡೆಸಬಾರದು ಎಂದು ಒತ್ತಾಯಿಸಿದರು.
ಸ್ಟ್ರೀಟ್ ವೆಂಡರ್ಸ್ (ಜೀವನೋಪಾಯ ರಕ್ಷಣೆ ಮತ್ತು ಬೀದಿಬದಿ ವ್ಯಾಪಾರ ನಿಯಂತ್ರಣ) ಕಾಯ್ದೆ-೨೦೧೪, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ವಿವಿಧ ಸಂಘಟನೆಗಳು ಆರೋಪಿಸಿವೆ.
ಗುರುತಿನ ಚೀಟಿ ವಿತರಣೆ, ವ್ಯಾಪಾರ ವಲಯಗಳ ಗುರುತಿಸುವಿಕೆ ಹಾಗೂ ಕಾನೂನುಬದ್ಧ ಸ್ಥಳಗಳ ಹಂಚಿಕೆ ಪೂರ್ಣಗೊಳಿಸದೇ ವ್ಯಾಪಾರಿಗಳನ್ನು ತೆರವುಗೊಳಿಸುವುದು ನ್ಯಾಯಸಮ್ಮತವಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ನಗರದಲ್ಲಿ ೮೦ ಸಾವಿರಕ್ಕೂ ಹೆಚ್ಚು ಪಿಎಂ-ಸ್ವನಿಧಿ ಯೋಜನೆ ಫಲಾನುಭವಿಗಳ ಜೀವನೋಪಾಯಕ್ಕೂ ಇದರಿಂದ ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದುವರೆಗೆ ಕೇವಲ ೨೪ ಸಾವಿರ ವ್ಯಾಪಾರಿಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದ್ದು, ಉಳಿದವರ ಸ್ಥಿತಿ ಅನಿಶ್ಚಿತವಾಗಿದೆ ಎಂದು ಸಂಘಟನೆಗಳು ತಿಳಿಸಿವೆ.
ಕರ್ನಾಟಕದ ವಿವಿಧ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ, ತೆರವು ಕಾರ್ಯಾಚರಣೆಯನ್ನು ತಕ್ಷಣ ಸ್ಥಗಿತಗೊಳಿಸಿ, ಎಲ್ಲ ಅರ್ಹ ವ್ಯಾಪಾರಿಗಳಿಗೆ ಕಾನೂನುಬದ್ಧ ಸ್ಥಳ ಕಲ್ಪಿಸಿದ ಬಳಿಕವೇ ಯಾವುದೇ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದವು.
ಸರ್ಕಾರ ಮಾತುಕತೆಗೆ ಮುಂದಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿದವು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ೫೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.






























