Home ಜಿಲ್ಲೆ ಬೆಂಗಳೂರು ‘ಭಾಗ್ಯವಂತರು’ ಧಾರಾವಾಹಿಯ ಪ್ರೀಮಿಯರ್ ಪ್ರದರ್ಶನ

‘ಭಾಗ್ಯವಂತರು’ ಧಾರಾವಾಹಿಯ ಪ್ರೀಮಿಯರ್ ಪ್ರದರ್ಶನ

ಬೆಂಗಳೂರು, ಜು.೬-ಸನ್ ಉದಯ ವಾಹಿನಿಯ ಹೊಸ ಧಾರಾವಾಹಿ ‘ಭಾಗ್ಯವಂತರು’ ಪ್ರಸಾರಕ್ಕೂ ಮುನ್ನ ವೀಕ್ಷಕರಿಗಾಗಿ ವಿಶೇಷ ಪ್ರೀಮಿಯರ್ ಪ್ರದರ್ಶನವನ್ನು ಭಾನುವಾರ ಬೇಡರಹಳ್ಳಿಯ ಸ್ಪೂರ್ತಿಧಾಮ ಹಾಲ್‌ನಲ್ಲಿ ಆಯೋಜಿಸಲಾಯಿತು. ಜುಲೈ ೬ರಿಂದ ಪ್ರಸಾರವಾಗುತ್ತಿರುವ ಧಾರಾವಾಹಿಯ ಮೊದಲ ಎರಡು ಕಂತುಗಳನ್ನು ಅಭಿಮಾನಿಗಳು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಯಕಿ ತನ್ವಿ ರಾವ್, ಚಿತ್ರರಂಗದಲ್ಲಿ ಪ್ರೀಮಿಯರ್ ಪ್ರದರ್ಶನ ಸಾಮಾನ್ಯವಾದರೂ, ವೀಕ್ಷಕರೊಂದಿಗೆ ಕುಳಿತು ಧಾರಾವಾಹಿ ವೀಕ್ಷಿಸಿರುವುದು ತಮ್ಮ ಮೊದಲ ಅನುಭವ ಎಂದು ಹೇಳಿದರು.ಹಿರಿಯ ನಟ ಸುರೇಶ್ ರೈ, ‘ಭಾಗ್ಯವಂತರು’ ವಿಭಿನ್ನ ಕಥಾಹಂದರ ಹೊಂದಿದ್ದು, ಕಲಾವಿದರು ಹಾಗೂ ತಂತ್ರಜ್ಞರ ಪರಿಶ್ರಮದಿಂದ ರೂಪುಗೊಂಡಿದೆ. ವೀಕ್ಷಕರ ಬೆಂಬಲ ಮತ್ತು ಆಶೀರ್ವಾದ ಮುಂದುವರಿಯಲಿ ಎಂದು ಕೋರಿದರು.

ನಿರ್ದೇಶಕ ಸಂಪೃಥ್ವಿ ಮಾತನಾಡಿ, ಬಹುತಾರಾಗಣದ ಈ ಧಾರಾವಾಹಿಯನ್ನು ಸವಾಲಾಗಿ ಸ್ವೀಕರಿಸಿದ್ದು, ತಂತ್ರಜ್ಞರು ಮತ್ತು ಕಲಾವಿದರ ಸಹಕಾರದಿಂದ ಗುಣಮಟ್ಟದ ಕೆಲಸ ಸಾಧ್ಯವಾಗಿದೆ ಎಂದು ತಿಳಿಸಿದರು. ಕಲಾವಿದರಾದ ಆರ್.ಕೆ. ಚಂದನ್, ಶಾಲಿನಿ, ಸಮೀಕ್ಷಾ, ಧನ್ಯಾ, ವರ್ಷಾ, ಶ್ರೀವಾಯು, ಮಧುಸಾಗರ, ಲಕ್ಷ್ಮೀ ಹೆಗಡೆ, ರಿಷಾ, ವಿಠಲ್ ಕಾಮತ್, ಪ್ರಕೃತಿ ಪಾಟೀಲ್ ಹಾಗೂ ಜಯಲಕ್ಷ್ಮೀ ಪಟೇಲ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಎಎಸ್‌ಎಂ ಪ್ರೊಡಕ್ಷನ್ಸ್ ಅಡಿಯಲ್ಲಿ ರಮಣ ಬಂಗಾರು ನಿರ್ಮಿಸಿರುವ ‘ಭಾಗ್ಯವಂತರು’ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೭.೩೦ಕ್ಕೆ ಸನ್ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.