
ಬೆಂಗಳೂರು, ಜು. ೬: ಪ್ರತಿಯೊಬ್ಬರಿಗೂ ತಮ್ಮ ಜಾತಿ, ಧರ್ಮ ಹಾಗೂ ಸಂಪ್ರದಾಯಗಳ ಬಗ್ಗೆ ಅಭಿಮಾನ ಮತ್ತು ಗೌರವ ಇರುವಂತೆಯೇ, ಇತರರ ಆಚರಣೆಗಳ ಬಗ್ಗೆಯೂ ಪ್ರೀತಿ, ಸಹಿಷ್ಣುತೆ ಮತ್ತು ಗೌರವದ ಮನೋಭಾವ ಇರಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೋ. ಎಲ್.ಎನ್. ಮುಕುಂದರಾಜು ಹೇಳಿದರು.
ನಗರದ ಕಬ್ಬನ್ ಪಾರ್ಕ್‌ನ ಎನ್‌ಜಿಒ ಸಭಾಂಗಣದಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘವು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ. ಅಮ್ಮಸಂದ್ರ ಸುರೇಶ್ ಅವರ ‘ಅಂಚೆ ಕಥನ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
“ಒಂದು ಕಾಲದಲ್ಲಿ ನಾನೂ ಸಹ ಕೋಮುವಾದಿ ಮನೋಭಾವ ಹೊಂದಿದ್ದೆ. ಆದರೆ ಕನ್ನಡ ಸಾಹಿತ್ಯದ ಅಧ್ಯಯನದಿಂದ ನನಗೆ ಮಾನವೀಯತೆ ಮತ್ತು ಸಹಬಾಳ್ವೆಯ ನಿಜವಾದ ಅರ್ಥ ಅರಿವಾಯಿತು. ಸಾವಿರಾರು ವರ್ಷಗಳಿಂದ ಕನ್ನಡ ಸಾಹಿತ್ಯವೇ ಸಮಾನತೆ, ಸಹಿಷ್ಣುತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುತ್ತ ಬಂದಿದೆ” ಎಂದು ಪ್ರೋ. ಮುಕುಂದರಾಜು ಅವರು ವಿವಿಧ ಸಾಹಿತ್ಯ ಕೃತಿಗಳ ಉದಾಹರಣೆಗಳೊಂದಿಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಚೆ ಇಲಾಖೆಯ ನಿರ್ದೇಶಕ ಸಂದೇಶ್ ಮಹಾದೇವಪ್ಪ ಮಾತನಾಡಿ, “ಹಣ ಮಾತ್ರ ಜೀವನದಲ್ಲಿ ತೃಪ್ತಿ ನೀಡುವುದಿಲ್ಲ. ತಮ್ಮ ಮನಸ್ಸಿಗೆ ಹತ್ತಿರವಾದ ಕೆಲಸಗಳಲ್ಲಿ ತೊಡಗಿಸಿಕೊಂಡಾಗಲೇ ನಿಜವಾದ ಸಂತೃಪ್ತಿ ದೊರೆಯುತ್ತದೆ. ಸಾಹಿತ್ಯ ಸೃಜನಶೀಲತೆಯೂ ಅಂತಹ ತೃಪ್ತಿಯನ್ನು ನೀಡುವ ಸಾಧನವಾಗಿದೆ” ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಅವರು ಅಂಚೆ ಇಲಾಖೆಯಲ್ಲಿ ಆಗುತ್ತಿರುವ ಆಧುನೀಕರಣ ಮತ್ತು ತಂತ್ರಜ್ಞಾನ ಅಳವಡಿಕೆ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಹಾಗೂ ಲೇಖಕ ಮಂಜುನಾಥ್ ದಂಡಿನಶಿವರ ಮಾತನಾಡಿ, ‘ಅಂಚೆ ಕಥನ’ ಎಂಬ ಶೀರ್ಷಿಕೆಯೇ ಓದುಗರಲ್ಲಿ ಕುತೂಹಲ ಮೂಡಿಸುತ್ತದೆ. ಅಂಚೆ ವ್ಯವಸ್ಥೆ ಕೇವಲ ಪತ್ರಗಳನ್ನು ಸಾಗಿಸುವ ವ್ಯವಸ್ಥೆಯಲ್ಲ; ಅದು ಕುಟುಂಬಗಳ ನೆನಪುಗಳು, ಭಾವನೆಗಳು, ಸಂಬಂಧಗಳು ಹಾಗೂ ಸಮಾಜದ ಇತಿಹಾಸವನ್ನು ಹೊತ್ತು ಸಾಗಿದ ಜೀವಂತ ಮಾಧ್ಯಮವಾಗಿದೆ. ಅಂತಹ ಅಪರೂಪದ ಅನುಭವಗಳನ್ನು ದಾಖಲಿಸಿರುವ ಈ ಕೃತಿ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೃತಿಯ ಲೇಖಕ ಡಾ. ಅಮ್ಮಸಂದ್ರ ಸುರೇಶ್, ಪ್ರಕಾಶಕ ಸಿದ್ದೇಶ್ವರಪ್ಪ, ಅಂಚೆ ಇಲಾಖೆಯ ರವಿ ಬಿ. ಪಾಟೀಲ್, ರಾಜೇಶ್ ಭಾಸ್ಕರ್, ಜಿಪಿಒ ಚಂದ್ರು ಸೇರಿದಂತೆ ಹಲವರು ಉಪಸ್ಥಿತರಿದ್ದರು.































