
ಬೆಂಗಳೂರು,ಜು.೬: ಅಯೋಧ್ಯೆಯ ರಾಮಮಂದಿರದ ನಂತರ ದೇಶದ ಇತರೆ ದೇವಾಲಯಗಳ ಹುಂಡಿಗಳಲ್ಲೂ ಚಂದಾ ಚೋರಿ ಪ್ರಕರಣಗಳು ವರದಿಯಾಗುತ್ತಿರುವುದು ಆಘಾತಕರ ಬೆಳವಣಿಗೆಯಾಗಿದೆ. ಚಂದಾ ಚೋರಿ ಬಗ್ಗೆ ಬಿಜೆಪಿ ಮತ್ತು ಆರ್.ಎಸ್.ಎಸ್ ನಾಯಕರು ದೇಶದ ಜನರಿಗೆ ಚಂದಮಾಮ ಕಥೆ ಹೇಳುತ್ತಿದ್ದಾರೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ವ್ಯಂಗ್ಯವಾಡಿದ್ದಾರೆ.
ಇದು ಬಿಜೆಪಿಯ ಹುಂಡಿಹಣ ದರೋಡೆ ಮಾಡುವ ಆಧುನಿಕ “ಭಕ್ತಿ ಪಂಥ”ವಾಗಿದೆ. ದೇವರನ್ನೇ ಹಗಲು ದೋರೋಡೆ ಮಾಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇಂಡೋನೇಷ್ಯಾ, ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ದಾಳಿ ಮಾಡುತ್ತಿರುವಾಗ ಮೋದಿ ಪಲಾಯನವಾದದ ಕುತಂತ್ರ ಅನುಸರಿಸುತ್ತಿದ್ದಾರೆ. ಪ್ರತಿಯೊಂದನ್ನೂ ಟೀಕಿಸುವ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು ಮೌನಿ ಬಾಬಾಗಳಾಗಿದ್ದು, ಭೋರ್ಗರೆಯುತ್ತಿದ್ದ ಬಿಜೆಪಿ ಸಾಮಾಜಿಕ ಜಾಲತಾಣ ಸ್ಥಬ್ದವಾಗಿದೆ. ಭಕ್ತಿಯ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದರೂ ಬಿಜೆಪಿಯಲ್ಲಿ ಪಾಪಪ್ರಜ್ಞೆ ಕಾಡುತ್ತಿಲ್ಲ ಎಂದಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಕ್ತರ ಹಣ ದೇವರ ಸೇವೆಗೆ ಬಳಕೆಯಾಗಬೇಕೆ ಹೊರತು ಭ್ರಷ್ಟರ ಜೇಬು ತುಂಬಿಸಲು ಅಲ್ಲ. ಹುಂಡಿ ದೋಚುವುದು ಕಳ್ಳತನವಷ್ಟೇ ಅಲ್ಲದೇ ಅದು ಕೋಟ್ಯಂತರ ಭಕ್ತರ ನಂಬಿಕೆಯ ಮೇಲಿನ ಧಾರ್ಮಿಕ ದಾಳಿಯಾಗಿದೆ. ದೇವಾಲಯ ನಂಬಿಕೆ, ಭಕ್ತಿ, ಸಂಸ್ಕೃತಿ ಮತ್ತು ಧರ್ಮದ ಸಂಕೇತ. ಆದರೆ ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ದೇವಾಲಯಗಳ ಹುಂಡಿಗಳಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ. ಅವ್ಯವಹಾರ ಮತ್ತು ಲೆಕ್ಕಪತ್ರಗಳಲ್ಲಿನ ಅಕ್ರಮಗಳ ಆರೋಪಗಳು ಹೆಚ್ಚುತ್ತಿರುವುದು ಭಕ್ತರನ್ನು ತೀವ್ರವಾಗಿ ಬಾಧಿಸುತ್ತಿದೆ ಎಂದಿದ್ದಾರೆ.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ದೇಶದ ಮೂಲೆಮೂಲೆಗಳಿಂದ ಭಕ್ತರು ಅಪಾರ ಪ್ರಮಾಣದಲ್ಲಿ ದೇಣಿಗೆ ನೀಡಿದ್ದಾರೆ. ಆ ನಿಧಿಯ ಬಳಕೆಯ ಕುರಿತು ಕೆಲ ಆರೋಪಗಳು ಮತ್ತು ವಿವಾದಗಳು ಸಾರ್ವಜನಿಕ ಚರ್ಚೆಗೆ ಗ್ರಾಸವಾದ ನಂತರ, ಇತರ ದೇವಾಲಯಗಳಲ್ಲಿಯೂ ಹುಂಡಿ ಹಣದ ನಿರ್ವಹಣೆ ಕುರಿತು ಪ್ರಶ್ನೆಗಳು ಕೇಳಿಬರುತ್ತಿವೆ. ಆರೋಪಗಳ ಸತ್ಯಾಸತ್ಯತೆಯನ್ನು ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಂಗವೇ ನಿರ್ಧರಿಸಬೇಕಾದರೂ, ಇಂತಹ ಆರೋಪಗಳೇ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತರುವಷ್ಟು ಗಂಭೀರವಾಗಿವೆ ಎಂದು ಡಾ. ಆನಂದ ಕುಮಾರ್ ದೂರಿದ್ದಾರೆ.































