Home ಜಿಲ್ಲೆ ಶಿಸ್ತು, ಭಾವೈಕ್ಯ ಮೂಡಿಸುವ ಭಾರತ ಸೇವಾದಳ: ಎಸ್.ಆರ್. ನಡುಗಡ್ಡಿ

ಶಿಸ್ತು, ಭಾವೈಕ್ಯ ಮೂಡಿಸುವ ಭಾರತ ಸೇವಾದಳ: ಎಸ್.ಆರ್. ನಡುಗಡ್ಡಿ

ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೫:- ಭಾರತ ಸೇವಾದಳವು ನಿಸ್ವಾರ್ಥ ಸೇವೆಯ ಮೂಲಕ ಸಮಾಜದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದು, ದೇಶದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಸೇವಾದಳದ ಚಟುವಟಿಕೆಗಳು ಶಿಸ್ತು, ಸಂಯಮ ಹಾಗೂ ರಾಷ್ಟ್ರಪ್ರೇಮವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್. ನಡುಗಡ್ಡಿ ಹೇಳಿದರು.
ಇಂಡಿ ನಗರದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ತಾಲೂಕ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕ ಮಟ್ಟದ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಮಿತಿ ಸದಸ್ಯ ಶ್ರೀಮಂತ ಇಂಡಿ ಮಾತನಾಡಿ, ಇಂದಿನ ಯುವ ಪೀಳಿಗೆಯಲ್ಲಿ ದೇಶಭಕ್ತಿ, ರಾಷ್ಟ್ರೀಯ ಐಕ್ಯತೆ ಹಾಗೂ ದೇಶದ ಬಗ್ಗೆ ಗೌರವದ ಮನೋಭಾವವನ್ನು ಬೆಳೆಸುವುದು ಭಾರತ ಸೇವಾದಳದ ಪ್ರಮುಖ ಉದ್ದೇಶವಾಗಿದೆ. ಶಿಕ್ಷಕರು ಮತ್ತು ಕಾರ್ಯಕರ್ತರು ಸೇವಾದಳದ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟಕ ನಾಗೇಶ ಡೋಣೂರ, ಶಿಕ್ಷಕ ಸಂತೋಷ ಬಂಡೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ರಾವೂರ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಮಹಾದೇವ ಪ್ಯಾಟಿ ಮಾತನಾಡಿದರು.
ವೇದಿಕೆಯಲ್ಲಿ ಎಚ್.ಕೆ. ಮಾಳಗೊಂಡ, ಅಶೋಕ ರಾಠೋಡ ಹಾಗೂ ಆನಂದ ಕೆಂಭಾವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸೇವಾದಳದ ಸೇವೆಯಿಂದ ನಿವೃತ್ತರಾದ ಜಿ.ಜಿ. ಬರಡೋಲ ಅವರನ್ನು ತಾಲೂಕು ಹಾಗೂ ಜಿಲ್ಲಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕ ಅಧಿನಾಯಕ ಎಸ್.ಬಿ. ಕಲ್ಲೋಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಿನ ವಿವಿಧ ಶಾಲೆಗಳ ಸೇವಾದಳದ ಶಿಕ್ಷಕರು ಹಾಗೂ ಶಿಕ್ಷಕಿಯರು ಶಿಬಿರದಲ್ಲಿ ಭಾಗವಹಿಸಿದ್ದರು.