
ರಾಮನಗರ,ಜು.೦೨: ಕೆಲ ಸದಸ್ಯರ ವಿರೋಧದ ನಡುವೆಯೂ ನೀರಿನ ದರ ಹೆಚ್ಚಳಕ್ಕೆ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ನಾಮಿನಿ ಸದಸ್ಯ ಬೈರೇಗೌಡ, ನಿಜಾಮುದ್ದೀನ್ ಷರೀಫ್, ಅಕ್ಲಿಂ ಪಾಷಾ ಸೇರಿದಂತೆ ಕೆಲ ಸದಸ್ಯರು ನೀರಿನ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಅಧ್ಯಕ್ಷ ಕೆ.ಶೇಷಾದ್ರಿ,ಜಲಮಂಡಳಿ ಅಧಿಕಾರಿಗಳು ಕಳೆದ ೬ ತಿಂಗಳಿಂದಲೂ ನೀರಿನ ದರ ಹೆಚ್ಚಳ ಕೋರಿ ಮನವಿ ಸಲ್ಲಿಸಿದ್ದು,ನಾನೇ ಅದನ್ನು ಮುಂದೂಡುತ್ತಾ ಬಂದಿದ್ದೇನೆ.ಈಗಲೂ ದರ ಹೆಚ್ಚಳ ಮಾಡದಿದ್ದರೆ ಜಲಮಂಡಳಿ ಸಂಕಷ್ಟಕ್ಕೆ ಸಿಲುಕಲಿದೆ.ದೈನಂದಿನ ನಿರ್ವಹಣೆ ಹಾಗೂ ನೌಕರರಿಗೆ ವೇತನ ನೀಡಲು ತೊಂದರೆ ಆಗಲಿದೆ.ಈ ಹಿನ್ನೆಲೆಯಲ್ಲಿ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಸದಸ್ಯರ ಮನವೊಲಿಸಲು ಯತ್ನಿಸಿದರು.
ಜಲಮಂಡಳಿ ಅಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆಯಂತೆ ಶೇ.೬೦ ರಷ್ಟು ದರ ಹೆಚ್ಚಳ ಮಾಡಿದರೆ ಸಾರ್ವಜನಿಕರಿಗೆ ಹೊರೆಯಾಗಲಿದೆ.ಹೆಚ್ಚಳ ಮಾಡಲೇಬೇಕೆಂದಾದರೆ ಕನಿಷ್ಠ ದರ ಹೆಚ್ಚಳ ಮಾಡುವಂತೆ ಸಲಹೆ ನೀಡಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಕೆ.ಶೇಷಾದ್ರಿ ಅವರು ಭರವಸೆ ನೀಡಿ ಚರ್ಚೆಗೆ ತೆರೆ ಎಳೆಯಲಾಯಿತು.
ಇನ್ನು ಬೆಂಗಳೂರು-ಮೈಸೂರು ಹೆದ್ದಾರಿಯ ಅರ್ಕಾವತಿ ಸೇತುವೆ ಬಳಿ ನಗರಸಭೆ ವತಿಯಿಂದ ನಿರ್ಮಿಸುತ್ತಿರುವ ಫುಡ್ ಕೋರ್ಟ್ ಮಳಿಗೆಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಲು ನಗರಸಭೆ ಸಾಮಾನ್ಯ ಸಭೆ ಅನುಮೋದನೆ ನೀಡಲಾಯಿತು. ರೂ.೪೯ ಲಕ್ಷ ವೆಚ್ಚದಲ್ಲಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಫುಡ್ ಕೋರ್ಟ್ ಅನ್ನು ರಾಮನಗರ ನಗರಸಭೆ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಶೀಘ್ರದಲ್ಲೆ ಕಾಮಗಾರಿ ಮುಕ್ತಾಯಗೊಳ್ಳಲಿದೆ. ಸರ್ಕಾರಿ ನಿಯಮಾವಳಿಯನ್ವಯ ಮಳಿಗೆಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಬೇಕು. ಅಲ್ಲಿ ಆಹಾರ ಉತ್ಪನ್ನಗಳ ಮಾರಾಟಕ್ಕೆ ಮಾತ್ರ ಅವಕಾಶ. ಇನ್ನಿತರ ವ್ಯಾಪಾರಗಳಿಗೆ ಅವಕಾಶ ನೀಡುವುದಿಲ್ಲ. ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲು ಸಭೆ ಸರ್ವಾನುಮತದ ಅನುಮೋದನೆ ನೀಡಿತು.
ಇದಲ್ಲದೆ, ನಗರ ವ್ಯಾಪ್ತಿಯ ಐಜೂರು ಗುಡ್ಡೆ ನಾಗನಕಟ್ಟೆ ಹಾಗೂ ಇತರೆ ಪ್ರದೇಶಗಳನ್ನು ಕೊಳಗೇರಿ ಪ್ರದೇಶ ಎಂದು ಘೋಷಣೆ ಮಾಡುವುದು, ವಾರ್ಡ್ ನಂಬರ್ ೩೦ರ ವಾಟರ್ ಟ್ಯಾಂಕ್ ಸರ್ಕಲ್‌ಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಎಂದು ಹೆಸರಿಡುವುದು, ನಗರಸಭೆಗೆ ಹೊಂದಿಕೊಂಡಿರುವ ರಾಯರದೊಡ್ಡಿ ಶಾಂತಿನಗರ ಬಡಾವಣೆಗೆ ಕಾವೇರಿ ನೀರಿನ ಪೈಪ್‌ಲೈನ್ ವಿಸ್ತರಿಸುವುದು, ೨೧ನೇ ವಾರ್ಡ್‌ನ ಅರ್ಕೇಶ್ವರ ಕಾಲೋನಿಯ ಆಂಜನೇಯ ದೇವಸ್ಥಾನ ಹಾಗೂ ಅಂಗನವಾಡಿ ಕೇಂದ್ರಕ್ಕೆ ಬದಲಿ ಸ್ಥಳ ನೀಡುವುದು. ಹರೀಸಂದ್ರ ಗ್ರಾಮ ಪಂಚಾಯಿತಿ ಸರ್ವೆ ನಂ.೧೬೬ರಲ್ಲಿ ರಾಮನಗರದ ನಗರಸಭಾ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿ ಘಟಕದ ಲ್ಯಾಂಡ್‌ಫಿಲ್ ಘಟಕಕ್ಕೆ ತಡೆಗೋಡೆ ನಿರ್ಮಾಣ ಮಾಡುವ ರೂ.೨೯.೫೦ ಲಕ್ಷ ವೆಚ್ಚದ ಕಾಮಗಾರಿ. ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ ವಿಭಜಕ ಹಾಳಾಗಿದ್ದು, ಜಕಂಗೊಂಡಿರುವ ಕಬ್ಬಿಣದ ಜಾಲರಿಗಳನ್ನು ದುರಸ್ಥಿಗೊಳಿಸುವುದು, ರಾಜ್‌ಕುಮಾರ್ ಕಾಂಪ್ಲೆಕ್ಸ್ ನ ೧೯ ಮಳಿಗೆ, ರಂಗಮಂದಿರ, ಕುಮಂದನ್ ಮೊಹಲ್ಲಾದಲ್ಲಿರುವ ೬ ಮಳಿಗೆಗಳ ಬಾಡಿಗೆಯನ್ನು ಶೇ.೨೫ರಷ್ಟು ಕಡಿಮೆ ಮಾಡಿ ಬಹಿರಂಗ ಹರಾಜು ಮಾಡುವ ವಿಷಯಗಳಿಗೆ ಸಾಮಾನ್ಯ ಸಭೆ ಅನುಮೋದನೆ ನೀಡಿದೆ.
ಸಭೆಯಲ್ಲಿ ಜಲಮಂಡಳಿ ಅನುಷ್ಟಾನಕ್ಕೆ ತಂದಿರು ನೀರು ಸರಬರಾಜು ಕಾಮಗಾರಿ ಲೋಪದೋಷ ಕುರಿತು ನಗರಸಭೆ ಸದಸ್ಯರು ಚರ್ಚೆಗೆ ಮುಂದಾದರು, ಕೌನ್ಸಿಲ್ ಬಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭೇಟಿಗೆ ಕಾರ್ಯಕ್ರಮ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಇದರ ಬಗ್ಗೆ ಚರ್ಚಿಸಲು ವಿಶೇಷ ಸಾಮಾನ್ಯ ಸಭೆ ಕರೆಯುವುದಾಗಿ ತಿಳಿಸಿದ ನಗರಸಭಾಧ್ಯಕ್ಷರು ಸಭೆಯನ್ನು ಮುಕ್ತಾಯ ಗೊಳಿಸಿದರು.
ಈ ವೇಳೆ ಆಯುಕ್ತ ಡಾ.ಜಯಣ್ಣ, ಉಪಾಧ್ಯಕ್ಷ ಗಿರಿಜಮ್ಮ ಗುರುವೇಗೌಡ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.





























