
ಕೆಂಗೇರಿ ,ಮೇ. ೨೯ : ಬಡವರು,ದಲಿತರು, ಶೋಷಿತರ ನಿವೇಶನಕ್ಕೆ ಬೇಲಿ ಹಾಕಿ ದುಡ್ಡು ಮಾಡುವ ದಂಧೆ ಕೋರ ಪ್ರವೃತ್ತಿಯ ಸೋಗುಹಾಕಿ ವೇಷ ತೊಟ್ಟಿರುವ ರಾಜಕಾರಣಿ ನಾನಲ್ಲ, ಬಡವರ ನೋವಿಗೆ, ಸಂಕಟಕ್ಕೆ ದನಿಯಾಗಲು ಈ ಭಾಗದ ಶಾಸಕನಾಗಿದ್ದೇನೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ತಿಳಿಸಿದರು.
ಮಾಗಡಿ ಮುಖ್ಯ ರಸ್ತೆಯ ಕೊಡಿಗೇಹಳ್ಳಿ ರೆವಿನ್ಯೂ ನಿವೇಶನದಾರರ ಹಿತ ರಕ್ಷಣಾ ಸಮಿತಿ ವತಿಯಿಂದ ಬಿಡಿಎ ಸಂಸ್ಥೆಯಿಂದ ನಾಗರೀಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನ್ಯೂ ಹಾರ್ಡ್ವಿಕ್ ಇಂಡಿಯನ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾನು ಬದುಕಿರುವವರೆಗೂ ಯಾವುದೇ ಕಾರಣಕ್ಕೂ ಒಂದೇ ಒಂದು ಮನೆ ಬಿಡಿಎ ವತಿಯಿಂದ ಕೆಡವಲು ಬಿಡುವುದಿಲ್ಲ ಎಂದು ನಿವೇಶನದಾರರಿಗೆ ಭರವಸೆ ನೀಡಿದರು. ೨೦೦೮ ರಲ್ಲಿ ಬಿಡಿಎ ವತಿಯಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಸೂಚನೆ ನೀಡಿದ್ದಾರೆ ಆಗ ನಾನು ಶಾಸಕನಾಗಿರಲಿಲ್ಲ ಎಂದರು.
ಐದು ವರ್ಷಕ್ಕೊಮ್ಮೆ ಚುನಾವಣಾ ಸಮಯದಲ್ಲಿ ಬಂದು ಕಣ್ಣೀರಿಡುವ ರಾಜಕಾರಣಿ ನಾನಲ್ಲ, ನಿತ್ಯ ಕ್ಷೇತ್ರದ ಜನತೆಯೊಂದಿಗೆ ನಿಕಟ ಸಂಪರ್ಕ ಸಾಧಿಸಿ ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು. ರೈತರ ಪರ,ಬಡವರ ಪರ ಎಂದು ಉದ್ದುದ್ದ ಭಾಷಣ ಬಿಗಿಯುವವರು ಆಗ ಶಾಸಕರಾಗಿದ್ರಲ್ಲ ಏಕೆ ಅವರು ಭೂಸ್ವಾಧೀನ ಪ್ರಕ್ರಿಯೆಯಿಂದ ನಿವೇಶನಗಳನ್ನ ಕೈ ಬಿಡಿಸಲಿಲ್ಲ ಎಂದು ಪ್ರಶ್ನಿಸಿದರು. ಬಡವರು,ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಒಂದೊಂದು ರೂಪಾಯನ್ನ ಜೋಡಿಸಿ ನಿವೇಶನ ಖರೀದಿಸಿದ್ದೀರಿ ನಿಮಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾನೂನು ಅಡಿಯಲ್ಲಿ ನಿವೇಶನದಾರರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು. ನಾಲ್ಕು ಬಾರಿ ಶಾಸಕರಾಗಿ, ಮಂತ್ರಿಯಾಗಿ ಸೇವೆ ಮಾಡಲು ಆಶೀರ್ವಾದ ಮಾಡಿದ್ದೀರಿ ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ನಾನು ಶಾಸಕನಾಗಿರಲು ಅರ್ಹನಲ್ಲ ಎಂದರು.
ಬಿಡಿಎ ಕಾರ್ಯಪಾಲಕ ಅಭಿಯಂತರ ಅಶೋಕ್, ಕೆಂಪೇಗೌಡ ಬಡಾವಣೆಯ ಭೂಸ್ವಾಧೀನಾಧಿಕಾರಿ ಉಮೇಶ್, ಸಹಾಯಕ ಅಭಿಯಂತರ ಅರುಣ್, ಕೊಡಿಗೇಹಳ್ಳಿ ರೆವಿನ್ಯೂ ನಿವೇಶನದಾರರ ಹಿತ ರಕ್ಷಣಾ ಸಮಿತಿಯ ಗೌರವಾಧ್ಯಕ್ಷ ವಿ. ಕೃಷ್ಣಮೂರ್ತಿ, ಅಧ್ಯಕ್ಷೆ ಸಾವಿತ್ರಿ ಗೌಡ,ಕೊಡಿಗೇಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಎನ್. ನಂಜುಂಡೇಶ್, ದೇವರಾಜ್ ಹಿರಿಯ ಮುಖಂಡರಾದ ನಾಗರಾಜ್, ರಂಗನಾಥ್, ಸಮಿತಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

























