Home ಜಿಲ್ಲೆ ಬೆಂಗಳೂರು ಸಾವಯವ ಕೃಷಿಯಿಂದ ಭೂಮಿಯ ಫಲವತ್ತತೆ

ಸಾವಯವ ಕೃಷಿಯಿಂದ ಭೂಮಿಯ ಫಲವತ್ತತೆ

??????????????

ವಿಜಯಪುರ.ಮೇ೨೯:“ಭೂತಾಯಿಯ ಮಡಿಲಿಗೆ ರಾಸಾಯನಿಕಗಳೆಂಬ ಕಾರ್ಕೋಟಕ ವಿಷವನ್ನು ಸುರಿಯುವ ಮೂಲಕ ನಾವು ಭೂಮಿಯ ಫಲವತ್ತತೆಯನ್ನು ನಾಶಪಡಿಸುತ್ತಿದ್ದೇವೆ. ಅಷ್ಟೇ ಅಲ್ಲದೆ, ಅನಾರೋಗ್ಯಕರ ಆಹಾರವನ್ನು ಸೇವಿಸಿ ನಮ್ಮ ಆರೋಗ್ಯವನ್ನೂ ಹಾಳುಮಾಡಿಕೊಳ್ಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ, ರೈತರು ಹಾಗೂ ಮುಂದಿನ ಪೀಳಿಗೆಯ ಕೃಷಿ ವಿಜ್ಞಾನಿಗಳು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ಭೂತಾಯಿಗೆ ಗೌರವ ನೀಡಬೇಕು,” ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಕರೆ ನೀಡಿದರು.


ವಿಜಯಪುರ ಹೋಬಳಿಯ ಬಿಜ್ಜವಾರ ಗ್ರಾಮದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಕೃಷಿ-ತೋಟಗಾರಿಕೆ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಬಿ.ಎಸ್ಸಿ (ತೋಟಗಾರಿಕೆ) ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕಾ ಕಾರ್ಯಾಣುಭವ (ಖಊWಇ ೨೦೨೫-೨೬) ಕಾರ್ಯಕ್ರಮದ ’ಧರಣಿ ಸಮೃದ್ಧಿ’ ಸಮಾರೋಪ ಸಮಾರಂಭ ಹಾಗೂ ತೋಟಗಾರಿಕಾ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ದೇಶದ ಕೃಷಿ ಪ್ರಗತಿ ಹಾಗೂ ತಂತ್ರಜ್ಞಾನದ ಬಗ್ಗೆ ಮಾತನಾಡಿದ ಶ್ರೀಗಳು:ಆರ್ಥಿಕತೆಗೆ ಕೃಷಿಯ ಕೊಡುಗೆ: ಭಾರತದಲ್ಲಿ ಶೇ. ೬೦ ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದರೂ, ದೇಶದ ಆರ್ಥಿಕತೆಗೆ ಕೃಷಿ ವಲಯದಿಂದ ಸಿಗುತ್ತಿರುವ ಉತ್ಪತ್ತಿ ಕೇವಲ ಶೇ. ೧೮ ರಷ್ಟಿದೆ. ಇದನ್ನು ಹೆಚ್ಚಿಸಲು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ.


ಸ್ಮಾರ್ಟ್ ಕೃಷಿ ತಂತ್ರಜ್ಞಾನ: ಸಾಫ್ಟ್‌ವೇರ್ ರಂಗದ ’ವರ್ಕ್ ಫ್ರಮ್ ಹೋಮ್ ಮಾದರಿಯಲ್ಲೇ, ಕೃಷಿಯಲ್ಲೂ ಮನೆಯಲ್ಲೇ ಕುಳಿತು ಯಾವ ಗಿಡಕ್ಕೆ ರೋಗ ತಗುಲಿದೆ ಎಂಬುದನ್ನು ಪತ್ತೆಹಚ್ಚಿ, ಕೇವಲ ಆ ಗಿಡಕ್ಕೆ ಮಾತ್ರ ಔಷಧ ಸಿಂಪಡಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ನಾವು ಬೆಳೆಸಿಕೊಳ್ಳಬೇಕಿದೆ.


ಭಾರತದ ಸ್ವಾವಲಂಬನೆ: ೧೯೬೦ರ ದಶಕದಲ್ಲಿ ಅಮೆರಿಕ ದೇಶವು ಬಿಸಾಡುವಂತಹ ಆಹಾರ ಧಾನ್ಯಕ್ಕಾಗಿ ನಾವು ಕೈಚಾಚುವ ಪರಿಸ್ಥಿತಿ ಇತ್ತು. ಆದರೆ ಇಂದು ತಂತ್ರಜ್ಞಾನದ ಮುನ್ನಡೆಯಿಂದಾಗಿ ನಾವು ಬೇರೆ ದೇಶಗಳಿಗೆ ಆಹಾರ ರಫ್ತು ಮಾಡುವ ಮಟ್ಟಿಗೆ ಬೆಳೆದಿದ್ದೇವೆ.


ಕೈ ಮಣ್ಣು ಮಾಡದಿದ್ದರೆ ಡಿಗ್ರಿ ಇಲ್ಲ: ಈ ಹಿಂದೆ ಕೇವಲ ವೈದ್ಯಕೀಯ ರಂಗದಲ್ಲಿದ್ದ ’ಇಂಟರ್ನ್‌ಶಿಪ್ ವ್ಯವಸ್ಥೆ ಈಗ ಕೃಷಿ ಶಿಕ್ಷಣಕ್ಕೂ ಬಂದಿದೆ. ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಮಣ್ಣಿನಲ್ಲಿ ಇಳಿದು ಕೆಲಸ ಮಾಡದ ಹೊರತು ಅವರ ತೋಟಗಾರಿಕಾ ಪದವಿ ಪೂರ್ಣಗೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ತೋಟಗಾರಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ: ಡಾ. ವಿಷ್ಣುವರ್ಧನ್
ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ವಿಷ್ಣುವರ್ಧನ್ ಮಾತನಾಡಿ, “ಯಾವುದೇ ದೇಶ ಅಥವಾ ಮನುಷ್ಯನಿಗೆ ಆಹಾರ, ಆರೋಗ್ಯ ಮತ್ತು ಆದಾಯ ಈ ಮೂರೂ ಪ್ರಮುಖ ಅಂಶಗಳಾಗಿವೆ. ತೋಟಗಾರಿಕಾ ಬೆಳೆಗಳಿಂದ ಉತ್ತಮ ಆದಾಯ ಬರುವುದಲ್ಲದೆ, ಪೋಷಕಾಂಶಯುಕ್ತ ಹಣ್ಣು-ತರಕಾರಿಗಳ ಸೇವನೆಯಿಂದ ಆರೋಗ್ಯ ವೃದ್ಧಿಸುತ್ತದೆ,” ಎಂದರು.


ಪ್ರಮುಖ ಅಂಕಿ-ಅಂಶಗಳು:
೧೯೬೫ರಲ್ಲಿ ದೇಶದ ೨೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೇವಲ ೨೫ ಮೆಟ್ರಿಕ್ ಟನ್ ಬೆಳೆ ಇಳುವರಿ ಇತ್ತು. ಆದರೆ ಇಂದು ತಂತ್ರಜ್ಞಾನದ ಕಾರಣದಿಂದಾಗಿ ಕರ್ನಾಟಕವೊಂದರಲ್ಲೇ ೩೦೦ಕ್ಕೂ ಹೆಚ್ಚು ಮೆಟ್ರಿಕ್ ಟನ್ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ.


ತೋಟಗಾರಿಕಾ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ೩ನೇ ಸ್ಥಾನದಲ್ಲಿದ್ದರೆ, ಜಾಗತಿಕ ಮಟ್ಟದಲ್ಲಿ ಭಾರತ ೭ನೇ ಸ್ಥಾನದಲ್ಲಿದೆ.


ಕಳೆದ ೭ ವರ್ಷಗಳಿಂದ ತೋಟಗಾರಿಕಾ ಸಂಶೋಧನೆ ಹಾಗೂ ಬೆಳೆ ಇಳುವರಿ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ.


ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಜನಸಂಖ್ಯಾ ಸ್ಫೋಟದ ನಡುವೆಯೂ ಲಭ್ಯವಿರುವ ಕಡಿಮೆ ಭೂಮಿಯಲ್ಲೇ ಮಣ್ಣಿನ ಗುಣಮಟ್ಟ ಸುಧಾರಿಸಿ ಹೆಚ್ಚಿನ ಇಳುವರಿ ಪಡೆಯುವ ಸವಾಲನ್ನು ನಾವು ಎದುರಿಸಬೇಕಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.


ತಾಂತ್ರಿಕ ಗೋಷ್ಠಿ ಮತ್ತು ಪ್ರಮುಖರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಮಂಗಳನಾಥನಂದ ಸ್ವಾಮೀಜಿ, ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ಡಾ. ರಾಮಚಂದ್ರ ನಾಯಕ್, ನಿವೃತ್ತ ವಿಜ್ಞಾನಿ ಡಾ. ಜಿ.ಎಸ್. ಕೆ. ಸ್ವಾಮಿ, ಹಾಗೂ ಶಾಶ್ವತ ನೀರಾವರಿ ಹೋರಾಟಗಾರರಾದ ಆಂಜನೇಯ ರೆಡ್ಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕರುಗಳಾದ ಡಾ. ಇಟಗಿ ಪ್ರಭಾಕರ್, ಡಾ. ಡಿ.ಎಸ್. ಅಂಬಿಕಾ ಮತ್ತು ಡಾ. ಬಿ. ಪವನ್ ಕುಮಾರ್ ಅವರ ನೇತೃತ್ವದಲ್ಲಿ ತಾಂತ್ರಿಕ ಗೋಷ್ಠಿಗಳು ಜರುಗಿದವು:

ದ್ರಾಕ್ಷಿ ಬೆಳೆ ನಿರ್ವಹಣೆ: ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (IIಊಖ) ನಿವೃತ್ತ ಪ್ರಧಾನ ವಿಜ್ಞಾನಿ ಹಾಗೂ ’ಆಧುನಿಕ ದ್ರಾಕ್ಷಿ ಬೆಳೆಗಳ ಹರಿಕಾರ’ ಎಂದು ಹೆಸರಾದ ಡಾ. ಜಿ.ಎಸ್. ಪ್ರಕಾಶ್ ಅವರು ’ಅಧಿಕ ಇಳುವರಿ ಮತ್ತು ನಿಖರ ಪೋಷಕಾಂಶಗಳ ನಿರ್ವಹಣೆ’ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ದಾಳಿಂಬೆ ಸಂರಕ್ಷಣೆ: ಶೋಲಾಪುರದ ಹಿರಿಯ ವಿಜ್ಞಾನಿಗಳಾದ ಡಾ. ಎನ್. ಮಂಜುನಾಥ್ ಮತ್ತು ಡಾ. ಜಿ. ಬಸವನಗೌಡ ಅವರು ದಾಳಿಂಬೆ ಬೆಳೆ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು.

ಹೂವಿನ ಬೇಸಾಯ: ಬೆಂಗಳೂರು ತೋಟಗಾರಿಕಾ ಮಹಾವಿದ್ಯಾಲಯದ ಡಾ. ಎಚ್.ಎ. ಯತೀಂದ್ರ ಹಾಗೂ ಪಿ. ಪವನ್ ಕುಮಾರ್ ಅವರು ಸೇವಂತಿಗೆ ಮತ್ತು ಗುಲಾಬಿ ಬೆಳೆಗಳ ಆಧುನಿಕ ಸಮಗ್ರ ಬೇಸಾಯ ಪದ್ಧತಿಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಿದರು.

ಆಕರ್ಷಕ ವಸ್ತು ಪ್ರದರ್ಶನ ಮತ್ತು ೧೦೦ ದಿನಗಳ ವಿದ್ಯಾರ್ಥಿಗಳ ವಾಸ್ತವ್ಯ
ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ತೋಟಗಾರಿಕಾ ವಸ್ತು ಪ್ರದರ್ಶನದಲ್ಲಿ ದ್ರಾಕ್ಷಿ, ದಾಳಿಂಬೆ, ಸೇವಂತಿಗೆ, ಗುಲಾಬಿ ಬೆಳೆಗಳ ಸಂರಕ್ಷಣೆ, ಆಧುನಿಕ ನೀರಾವರಿ ಪದ್ಧತಿ, ಮಣ್ಣು ಮತ್ತು ರಾಸಾಯನಿಕ ಗೊಬ್ಬರಗಳ ಸದ್ಬಳಕೆ, ಜಾನುವಾರು ಮೇವು, ಸಾವಯವ ಮತ್ತು ಸುಸ್ಥಿರ ಕೃಷಿ ಯಂತ್ರೋಪಕರಣಗಳು ಹಾಗೂ ಕೃಷಿಯಲ್ಲಿ ಡ್ರೋನ್ ಮತ್ತು ರೊಬೊಟಿಕ್ಸ್ ತಂತ್ರಜ್ಞಾನದ ಬಳಕೆ ಕುರಿತಾದ ಮಳಿಗೆಗಳು ಮತ್ತು ಮಾರಾಟ ಪ್ರದರ್ಶನಗಳು ರೈತರ ಗಮನ ಸೆಳೆದವು.

ಬೆಂಗಳೂರು ತೋಟಗಾರಿಕಾ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ ತೋಟಗಾರಿಕೆಯ ೭೦ ವಿದ್ಯಾರ್ಥಿಗಳು ಕಳೆದ ೧೦೦ ದಿನಗಳ ಕಾಲ ವಿಜಯಪುರ ಹೋಬಳಿಯ ಬಿಜ್ಜವರ, ವೆಂಕಟಗಿರಿ ಕೋಟೆ ಹಾಗೂ ಮರವೇ ಗ್ರಾಮಗಳಲ್ಲಿ ಗ್ರಾಮೀಣ ವಾಸ್ತವ್ಯ ಹೂಡಿದ್ದರು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ರೈತರೊಂದಿಗೆ ನೇರವಾಗಿ ಹೊಲಗದ್ದೆಗಳಲ್ಲಿ ಬೆರೆತು ಮಣ್ಣಿನ ಗುಣಮಟ್ಟ, ನೀರಾವರಿ ಪದ್ಧತಿ, ಬೆಳೆ ನಿರ್ವಹಣೆ ಹಾಗೂ ರೋಗ ನಿಯಂತ್ರಣದ ಕುರಿತು ಪ್ರಾಯೋಗಿಕ ಕಾರ್ಯಾನುಭವ ಪಡೆದುಕೊಂಡಿರುವುದು ಈ ಸಮಾರೋಪ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು.