Home ಮುಖಪುಟ ಸುದ್ದಿ ಸೋನಿಯಾ, ರಾಹುಲ್‌ಗೆ ಸಿದ್ದು ಧನ್ಯವಾದ

ಸೋನಿಯಾ, ರಾಹುಲ್‌ಗೆ ಸಿದ್ದು ಧನ್ಯವಾದ

ಬೆಂಗಳೂರು, ಮೇ ೨೯- ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ದೆಹಲಿಗೆ ತೆರಳಿರುವ ಸಿದ್ದರಾಮಯ್ಯನವರು ಇಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಧನ್ಯವಾದ ಹೇಳಿದರು.


ನಿನ್ನೆ ರಾತ್ರಿಯೇ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯನವರು ಇಂದು ಬೆಳಿಗ್ಗೆಯೇ ಸೋನಿಯಾಗಾಂಧಿಯವರ ನಿವಾಸಕ್ಕೆ ತೆರಳಿ ಅಲ್ಲಿಯೇ ರಾಹುಲ್‌ಗಾಂಧಿ ಮತ್ತು ಸೋನಿಯಾಗಾಂಧಿಯವರನ್ನು ಭೇಟಿ ಮಾಡಿ ೧ ಗಂಟೆಗೂ ಹೆಚ್ಚು ಕಾಲ ಅವರ ಜತೆ ಚರ್ಚಿಸಿದರು.


ರಾಷ್ಟ್ರ ರಾಜಕಾರಣಕ್ಕೆ ಹೋಗಲು ನನಗೆ ಇಷ್ಟವಿಲ್ಲ. ರಾಜ್ಯ ರಾಜಕಾರಣದಲ್ಲಿ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಿರುವ ಸಿದ್ದರಾಮಯ್ಯನವರು ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆಯೂ ಈ ಮೂವರು ನಾಯಕರೊಂದಿಗೆ ಚರ್ಚೆ ನಡೆಸಿದರು ಎನ್ನಲಾಗಿದೆ.


ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಚನೆಯಾಗಲಿರುವ ಸರ್ಕಾರದಲ್ಲಿ ಯಾರಿಗೆಲ್ಲಾ ಸಚಿವ ಪಟ್ಟ ನೀಡಬೇಕು, ಈ ಹಿಂದೆ ತಮ್ಮ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಯಾವ ಯಾವ ನಾಯಕರುಗಳಿಗೆ ಸಚಿವ ಸ್ಥಾನ ನೀಡಬೇಕು. ಈ ಎಲ್ಲದರ ಬಗ್ಗೆಯೂ ಸಿದ್ದರಾಮಯ್ಯ ರಾಹುಲ್‌ಗಾಂಧಿಯವರ ಜತೆ ಸುದೀರ್ಘ ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.


ಈ ಭೇಟಿ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಜತೆ ಕೆ.ಜೆ. ಜಾರ್ಜ್ ಹಾಗೂ ಅವರ ಪುತ್ರ ಡಾ. ಯತೀಂದ್ರ ಇದ್ದರು.
ರಾಹುಲ್‌ಗಾಂಧಿ ಮತ್ತು ಸೋನಿಯಾಗಾಂಧಿಯವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಸಿದ್ದರಾಮಯ್ಯನವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ದೆಹಲಿ ನಿವಾಸಕ್ಕೆ ತೆರಳಿ ಅವರ ಜತೆಯೂ ಸುಮಾರು ಹೊತ್ತು ಮುಂದಿನ ಆಗು ಹೋಗುಗಳ ಬಗ್ಗೆ ಚರ್ಚಿಸಿದರು.


ಇಂದು ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲರವರನ್ನು ಭೇಟಿ ಮಾಡಿ ಮುಂದಿನ ಸಂಪುಟದಲ್ಲಿ ತಮ್ಮ ಆಪ್ತರಿಗೆ ಸಚಿವ ಸ್ಥಾನ ದೊರಕಿಸುವ ಬಗ್ಗೆಯೂ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.