Home ಮುಖಪುಟ ಸುದ್ದಿ ೨ ಕೋಟಿ ರೂ. ಆನೆ ದಂತ ವಶ: ನಾಲ್ವರು ವಶಕ್ಕೆ

೨ ಕೋಟಿ ರೂ. ಆನೆ ದಂತ ವಶ: ನಾಲ್ವರು ವಶಕ್ಕೆ

ಮೈಸೂರು ಮೇ ೨೮ :ವನ್ಯಜೀವಿ ಕಳ್ಳಸಾಗಣೆ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ನಾಗ್ಪುರ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಮೈಸೂರಿನಲ್ಲಿ ದಂತ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಾರೆ. ೨ ಕೋಟಿ ರೂ.ಗೂ ಅಧಿಕ ಮೌಲ್ಯದ ಮೂರು ದೊಡ್ಡ ಆನೆ ದಂತಗಳನ್ನು ವಶಪಡಿಸಿಕೊಂಡು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ವಶಪಡಿಸಿಕೊಂಡ ದಂತ: ಕಾರ್ಯಾಚರಣೆಯಲ್ಲಿ ವಿವಿಧ ಗಾತ್ರದ ಮೂರು ಆನೆ ದಂತಗಳನ್ನು ಜಪ್ತಿ ಮಾಡಲಾಗಿದೆ. ಅಧಿಕೃತ ತೂಕ ಇನ್ನೂ ಬಹಿರಂಗವಾಗಿಲ್ಲವಾದರೂ, ಮೂಲಗಳ ಪ್ರಕಾರ ದಂತಗಳು ತಲಾ ೫ ಕೆಜಿಯಿಂದ ೩೦ ಕೆಜಿ ತೂಕ ಹೊಂದಿವೆ.

ಬಂಧಿತ ಆರೋಪಿಗಳು:
೧. ಜಮುನಾ ರಾಣಿ ಕಾಕಬುಲ್ – ರಾಮಕೃಷ್ಣನಗರ ‘ಐ’ ಬ್ಲಾಕ್ ನಿವಾಸಿ, ಆಂಧ್ರಪ್ರದೇಶ ಸರ್ಕಾರದ ನಿವೃತ್ತ ಅರಣ್ಯಾಧಿಕಾರಿ
೨. ಸೈಯದ್ ಫಯಾಜ್ – ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಿವಾಸಿ
೩. ಮುನೀರ್ ಪಾಷಾ – ಕೊಳ್ಳೇಗಾಲ
೪. ಅಜ್ಗರ್ ಖಾನ್ – ಕೊಳ್ಳೇಗಾಲ

ಡಿಆರ್‌ಐ ತಂಡ ದಾಳಿ ನಡೆಸಿದ ವೇಳೆ ಜಮುನಾ ರಾಣಿ ಕಾಕಬುಲ್ ಮತ್ತು ಪತಿ ವೆಂಕಟೇಶ್ ಕಾಕಬುಲ್ ಮನೆಯಲ್ಲಿದ್ದರು.

ಪ್ರಾಥಮಿಕ ತನಿಖೆ: ನಿವೃತ್ತ ಅರಣ್ಯಾಧಿಕಾರಿ ಜಮುನಾ ರಾಣಿ ಕಾಕಬುಲ್ ಅಕ್ರಮವಾಗಿ ದಂತ ವ್ಯಾಪಾರಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಪತಿ ವೆಂಕಟೇಶ್ ಕಾಕಬುಲ್ ಅವರಿಗೆ ಪತ್ನಿಯ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಇರಲಿಲ್ಲ ಹಾಗೂ ಈ ದಂಧೆಯಲ್ಲಿ ಅವರ ಯಾವುದೇ ಪಾತ್ರವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.