
ಯಾದಗಿರಿ:ಮೇ.೨೦: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಯುವ ಮುಖಂಡ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ ಅವರಿಗೆ ಜಿಲ್ಲಾ ಭಗೀರಥ ಸಮಾಜದ ವತಿಯಿಂದ ನಗರದಲ್ಲಿ ಅದ್ದೂರಿ ಅಭಿನಂದನಾ ಹಾಗೂ ಸನ್ಮಾನ ಸಮಾರಂಭವನ್ನು ಗೌರವಪೂರ್ವಕವಾಗಿ ಆಯೋಜಿಸಲಾಯಿತು.
ಸಮಾಜದ ಮುಖಂಡರು ಶಾಲು ಹೊದಿಸಿ, ಪುಷ್ಪಹಾರ ಸಮರ್ಪಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು. ಕಾರ್ಯಕ್ರಮವು ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ವಿವಿಧ ಸಮುದಾಯಗಳ ಗಣ್ಯರ ಸಮ್ಮುಖದಲ್ಲಿ ಅತ್ಯಂತ ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ, “ನಮ್ಮ ಕುಟುಂಬದ ಹಿರಿಯರಾದ ತಾತ, ದೊಡ್ಡಪ್ಪ ಹಾಗೂ ತಂದೆಯವರು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ಎಲ್ಲ ಸಮುದಾಯಗಳ ಜನರೊಂದಿಗೆ ಸಾಮರಸ್ಯ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಬೆಳೆಸಿಕೊಂಡು ಜನಮನ್ನಣೆ ಗಳಿಸಿದ್ದರು. ಸಮಾಜದಲ್ಲಿ ನಿಜವಾದ ನಾಯಕತ್ವ ಎಂಬುದು ಕೇವಲ ಒಂದು ಜಾತಿಗೆ ಸೀಮಿತವಾಗಿರದೇ, ಎಲ್ಲಾ ವರ್ಗದ ಜನರ ವಿಶ್ವಾಸ ಮತ್ತು ಸಹಭಾಗಿತ್ವದಿಂದ ನಿರ್ಮಾಣವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
“ನಾನು ಸಹ ನನ್ನ ಸಮಾಜದ ಜೊತೆಗೆ ಎಲ್ಲ ಸಮುದಾಯಗಳ ಕಟ್ಟಕಡೆಯ ವ್ಯಕ್ತಿಯ ನೋವು-ನಲಿವುಗಳಿಗೆ ಸ್ಪಂದಿಸುವ ಮನೋಭಾವವನ್ನು ಹೊಂದಿದ್ದೇನೆ. ಜಗಜ್ಯೋತಿ ಬಸವೇಶ್ವರರು ಬೋಧಿಸಿದ ಸಮಾನತೆ, ಸೌಹಾರ್ದತೆ ಹಾಗೂ ಮಾನವೀಯತೆಯ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಶಾಶ್ವತ ಗೌರವ ಮತ್ತು ಪ್ರೀತಿ ಗಳಿಸಲು ಸಾಧ್ಯ” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಭಗೀರಥ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ಮಾತನಾಡಿ, ಮಹೇಶರಡ್ಡಿ ಮುದ್ನಾಳ ಅವರ ನೇಮಕವು ಜಿಲ್ಲೆಯ ಯುವಕರಿಗೆ ಪ್ರೇರಣೆಯಾಗಿದ್ದು, ಸಮಾಜಮುಖಿ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಕೊಟಗೆರ, ವಿಶ್ವನಾಥ ಗುಡೂರ ಸೇರಿದಂತೆ ಸಮಾಜದ ಹಿರಿಯ ಮುಖಂಡರು, ಪದಾಧಿಕಾರಿಗಳು, ಯುವ ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಸಮಾಜ ಬಾಂಧವರು ಉಪಸ್ಥಿತರಿದ್ದರು.






















