Home ಜಿಲ್ಲೆ ಶೇ. ೯೫ರಷ್ಟು ಇ.ಡಿ ದಾಳಿಗಳು ಇಂಡಿಯಾ ಒಕ್ಕೂಟದ ನಾಯಕರ ಮೇಲೆಯೇ ಆಗಿವೆ : ಸಚಿವ ಲಕ್ಷ್ಮಣ...

ಶೇ. ೯೫ರಷ್ಟು ಇ.ಡಿ ದಾಳಿಗಳು ಇಂಡಿಯಾ ಒಕ್ಕೂಟದ ನಾಯಕರ ಮೇಲೆಯೇ ಆಗಿವೆ : ಸಚಿವ ಲಕ್ಷ್ಮಣ ಸವದಿ

ಅಥಣಿ : ದೇಶದಲ್ಲಿ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿಗಳ ಪೈಕಿ ಶೇಕಡಾ ೯೫ರಷ್ಟು ದಾಳಿಗಳು ಎನ್‌ಡಿಎ ಯೇತರ ವಿರೋಧ ಪಕ್ಷಗಳ ನಾಯಕರ ಮೇಲೆಯೇ ನಡೆದಿವೆ. ವಿರೋಧ ಪಕ್ಷದ ಮುಖಂಡರನ್ನು ಬೆದರಿಸಿ ತಮ್ಮ ಪಕ್ಷಕ್ಕೆ ಸೆಳೆಯುವುದು ಹಾಗೂ ವಿಪಕ್ಷಗಳ ನೈತಿಕ ಸ್ಥೈರ್ಯ ಕುಗ್ಗಿಸುವುದೇ ಈ ದಾಳಿಗಳ ಹಿಂದಿರುವ ಮುಖ್ಯ ಹುನ್ನಾರ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಹಕಾರ ಸಚಿವ ಲಕ್ಷ್ಮಣ ಸವದಿ ಎಂದು ಹೇಳಿದರು.

ಅವರು ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಮಸೀದಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ನಂತರ ಮಾಧ್ಯಮ ಜೊತೆಗೆ ಮಾತನಾಡಿದರು.
ದೇಶದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಇ.ಡಿ ದಾಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಶೇ. ೯೫ಕ್ಕಿಂತ ಹೆಚ್ಚು ದಾಳಿಗಳು ವಿರೋಧ ಪಕ್ಷದ ನಾಯಕರ ಮೇಲೆಯೇ ಸಂಭವಿಸಿವೆ. ಎನ್‌ಡಿಎ ಮೈತ್ರಿಕೂಟಕ್ಕೆ ಸೇರದ, ‘ಇಂಡಿಯಾ’ ಒಕ್ಕೂಟದ ಪ್ರಮುಖ ನಾಯಕರನ್ನೇ ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಗುತ್ತಿದೆ. ಈ ಕುರಿತು ಇಂದು ಇಡೀ ರಾಷ್ಟ್ರಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ, ಎಂದು ಕಿಡಿಕಾರಿದರು.

ಇ.ಡಿ ದಾಳಿಗಳು ಕಾಂಗ್ರೆಸ್ ಪಕ್ಷವನ್ನು ಮಣಿಸುವುದಕ್ಕೋ ಅಥವಾ ನಾಯಕರನ್ನು ಬಿಜೆಪಿಗೆ ಸೆಳೆಯುವುದಕ್ಕೋ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ಎರಡೂ ಒಳಾರ್ಥಗಳು ಅಡಗಿವೆ. ಒಂದೆಡೆ ನಾಯಕರನ್ನು ಕೇಸು ಮತ್ತು ತನಿಖೆಗಳ ಹೆಸರಿನಲ್ಲಿ ಹೆದರಿಸಿ, ಬೆದರಿಸಿ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುವ ಕೆಲಸ ನಡೆಯುತ್ತಿದೆ. ಇನ್ನೊಂದೆಡೆ, ಬಿಜೆಪಿ ಅಥವಾ ಎನ್‌ಡಿಎ ಸೇರಲು ನಿರಾಕರಿಸುವ ಮುಖಂಡರ ಹಾಗೂ ಅವರ ಪಕ್ಷದ ಆತ್ಮಸ್ಥೈರ್ಯವನ್ನು ಸಂಪೂರ್ಣವಾಗಿ ಕುಗ್ಗಿಸುವ ಷಡ್ಯಂತ್ರ ಇದರ ಹಿಂದಿದೆ. ಈ ಎರಡು ಸ್ಪಷ್ಟ ಉದ್ದೇಶಗಳಿಂದಲೇ ಇಂತಹ ದಾಳಿಗಳು ನಿರಂತರವಾಗಿ ಮುಂದುವರಿದಿವೆ, ಎಂದು ನೇರವಾಗಿ ಆಪಾದಿಸಿದರು.

ಬರ ಘೋಷಣೆ ಮತ್ತು ವಿದ್ಯುತ್ ಸಮಸ್ಯೆ ಕುರಿತು ಸ್ಪಷ್ಟನೆ : ಇದೇ ವೇಳೆ ಜಿಲ್ಲೆಯ ಬರಗಾಲ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ತಾಲೂಕುಗಳು ಮೊದಲ ಹಂತದ ಬರ ಪಟ್ಟಿಯಲ್ಲಿ ಸೇರದಿರಲು ಕೇಂದ್ರ ಸರ್ಕಾರ ನಡೆಸಿದ ಉಪಗ್ರಹ ಚಿತ್ರಗಳಲ್ಲಿ (ಸೆಟಲೈಟ್ ಮ್ಯಾಪಿಂಗ್) ಕಂಡುಬAದ ಕಬ್ಬು ಮತ್ತು ತೋಟಗಾರಿಕೆ ಬೆಳೆಗಳ ಹಸಿರು ಕಾರಣವೇ ಹೊರತು ರಾಜ್ಯ ಸರ್ಕಾರದ ನಿರ್ಲಕ್ಷ್ಯವಲ್ಲ ಎಂದರು. ಮಳೆ ಕೊರತೆ ಮುಂದುವರಿದರೆ ಸೆಪ್ಟೆಂಬರ್ ೧೮-೧೯ರ ನಂತರ ಎರಡನೇ ಹಂತದಲ್ಲಿ ಜಿಲ್ಲೆಯ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಲಿವೆ ಎಂದು ತಿಳಿಸಿದರು. ಅಲ್ಲದೆ, ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಸಿದಿದ್ದು, ಅಥಣಿ ತಾಲೂಕಿಗೆ ಬೇಕಾಗುವ ವಿದ್ಯುತ್ ಕೊರತೆಯನ್ನು ನಿವಾರಿಸಲು ಹೊರಗಿನಿಂದ ವಿದ್ಯುತ್ ಖರೀದಿಸಿ ಸರಬರಾಜು ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಸವದಿ ಸ್ಪಷ್ಟಪಡಿಸಿದರು

ಇದೆ ಸಂದರ್ಭದಲ್ಲಿ ಅಣ್ಣಸಾಬ ಪರಪ್ಪ ಸಂಕೋನಟ್ಟ, ಅಪ್ಪಸಾಬ ಪಾಟೀಲ, ಮೈನುಸಾಬ ಮೀರಾಗೊಳ , ಲಾಲಾಸಾಬ ಅನ್ನಸೀರಿ, ಮುತ್ತಣ್ಣ ಹಿಡಕಲ , ಶಿವಾನಂದ ಮಲೇವಾಡಿ, ಬಾಬು ಪಾಟೀಲ, ಭೂಪಾಲ ಹಳಿಂಗಳಿ, ಅಣ್ಣಸಾಬ ಯಂಡೋಳ್ಳಿ, ಬೀಮಪ್ಪ ಸಂಕೋನಟ್ಟಿ, ಶಿವಪ್ಪ ನೇಮಗೌಡ, ಹುಸೇನ ಮೀರಾಗೋಳ, ಬಂದು ಅನ್ನಸಿರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.