Home ಸಿನೆಮಾ 90ರ ದಶಕದ ಮರ್ಡರ್ ಮಿಸ್ಟರಿಯೊಂದಿಗೆ ಬರುತ್ತಿದೆ ‘ತದ್ವಿರುದ್ಧ’

90ರ ದಶಕದ ಮರ್ಡರ್ ಮಿಸ್ಟರಿಯೊಂದಿಗೆ ಬರುತ್ತಿದೆ ‘ತದ್ವಿರುದ್ಧ’

ಈ ವಾರ ರಾಜ್ಯಾದ್ಯಂತ ಬಿಡುಗಡೆ

ವಿಭಿನ್ನ ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ‘ತದ್ವಿರುದ್ಧ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಕುತೂಹಲ ಮೂಡಿಸಿರುವ ಈ ಸಿನಿಮಾ, 90ರ ದಶಕದ ಹಿನ್ನೆಲೆಯ ಮರ್ಡರ್ ಮಿಸ್ಟರಿ ಕಥೆಯನ್ನು ತೆರೆಗೆ ತರುತ್ತಿದ್ದು, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಪ್ರಿಯರಿಗೆ ಹೊಸ ಅನುಭವ ನೀಡುವ ಭರವಸೆ ಮೂಡಿಸಿದೆ.

CHARMION MOTION PICTURES ನಿರ್ಮಾಣದ ಈ ಚಿತ್ರದಲ್ಲಿ ಸ್ವಚ್ಛ ಕನ್ನಡದ ಸಂಭಾಷಣೆ ಹಾಗೂ ಅಭಿನಯದಿಂದ ಹೆಸರಾಗಿರುವ ಸುಚೇಂದ್ರ ಪ್ರಸಾದ್, ಹಿರಿಯ ನಟಿ ಸುಮನ್ ರಂಗನಾಥ್ ಮತ್ತು ವಿಕ್ರಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಐಶ್ವರ್ಯ ಬಿ. ಶೆಟ್ಟಿ, ಸುವಿನ್ ಗೌಡ, ಪೂಜಾ ಗೌಡ ಹಾಗೂ ಅಭಿಲಾಶ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಚಿತ್ರವನ್ನು ವಿನೋದ್ ಜೆ. ರಾಜ್ ನಿರ್ದೇಶಿಸಿದ್ದು, ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನೂ ಅವರೇ ನಿರ್ವಹಿಸಿದ್ದಾರೆ. “ವಾಸ್ತವಕ್ಕೆ ವಿರುದ್ಧವಾಗಿ ನಡೆಯುವ ಘಟನೆಗಳೇ ‘ತದ್ವಿರುದ್ಧ’ ಎಂಬ ಶೀರ್ಷಿಕೆಯ ಅರ್ಥ” ಎಂದು ನಿರ್ದೇಶಕರು ತಿಳಿಸಿದ್ದಾರೆ.

ಸುಚೇಂದ್ರ ಪ್ರಸಾದ್, ಸುಮನ್ ರಂಗನಾಥ್, ವಿಕ್ರಮ್ ಸೇರಿದಂತೆ ಐದು ಪ್ರಮುಖ ಪಾತ್ರಗಳ ಸುತ್ತ ಕಥೆ ಸಾಗಲಿದ್ದು, ಪ್ರತಿಯೊಂದು ಪಾತ್ರವೂ ಕಥೆಯ ಕುತೂಹಲವನ್ನು ಹೆಚ್ಚಿಸುವ ರೀತಿಯಲ್ಲಿ ರೂಪುಗೊಂಡಿದೆ. ಮರ್ಡರ್ ಮಿಸ್ಟರಿ ಶೈಲಿಯ ಈ ಚಿತ್ರದಲ್ಲಿ ಸಸ್ಪೆನ್ಸ್, ಭಾವನಾತ್ಮಕ ಅಂಶಗಳು ಹಾಗೂ ಅನಿರೀಕ್ಷಿತ ತಿರುವುಗಳು ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳಲಿವೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಚಿತ್ರಕ್ಕೆ ಕೆ.ಆರ್. ರವಿಚಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದು, ಗುಣಮಟ್ಟದ ಕಥಾವಸ್ತು ಮತ್ತು ತಾಂತ್ರಿಕ ನಿರೂಪಣೆಯೊಂದಿಗೆ ಕನ್ನಡ ಸಿನಿಪ್ರಿಯರಿಗೆ ವಿಭಿನ್ನ ಚಿತ್ರವನ್ನು ನೀಡುವ ಪ್ರಯತ್ನವನ್ನು ತಂಡ ಮಾಡಿದೆ.