Home ಜಿಲ್ಲೆ ಬೆಂಗಳೂರು ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಶೇ.೭.೫ ಮೀಸಲಾತಿ ಸ್ವಾಗತಾರ್ಹ

ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಶೇ.೭.೫ ಮೀಸಲಾತಿ ಸ್ವಾಗತಾರ್ಹ

ಕೋಲಾರ,ಸೆ,೯- ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.೭.೫ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಶ್ಲಾಘನೀಯವಾಗಿದ್ದು, ಪೋಷಕರು ಕಾನ್ವೆಂಟ್ ವ್ಯಾಮೋಹ ಬಿಟ್ಟು ಮಕ್ಕಳನ್ನು ದಾಖಲಿಸಿ ಎಂದು ಸೂಲೂರು ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಕರೆ ನೀಡಿದರು.


ತಾಲ್ಲೂಕಿನ ಸೂಲೂರು ಸರ್ಕಾರಿ ಹಿರಿಯಪ್ರಾಥಮಿಕ ಶಾಲಾ ಮಕ್ಕಳಿಗೆ ತಾವೇ ಕೊಡುಗೆಯಾಗಿ ನೀಡಿರುವ ಟ್ರ್ಯಾಕ್ ಸೂಟ್ ವಿತರಿಸಿ, ಸರ್ಕಾರದ ಸೌಲಭ್ಯಗಳ ಸದುಪಯೋಗಕ್ಕೆ ಮನವಿ ಮಾಡಿ ಅವರು ಮಾತನಾಡಿದರು.


ಕಾನ್ವೆಂಟ್ ವ್ಯಾಮೋಹ ಬಿಟ್ಟು ಮಕ್ಕಳಿಗೆ ಸಂಸ್ಕಾರ,ಶಿಸ್ತು, ಬದುಕು ಕಲಿಸುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ ಅವರನ್ನು ದೇಶದ ಆಸ್ತಿಯಾಗಿಸಿ ಎಂದು ಪೋಷಕರಿಗೆ ಕಿವಿಮಾತು ಹೇಳಿದ ಅವರು, ಸರ್ಕಾರದ ಶೇ.೭.೫ ಮೀಸಲಾಯಿತಿಯಿಂದಾಗಿ ಹಳ್ಳಿ ಮಕ್ಕಳಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟರು.


ಮೊಬೈಲ್,ಟಿವಿಯಿಂದ ದೂರವಿರಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಅವರು, ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ಇಲ್ಲಿ ಸಿಗುತ್ತಿದೆ, ಈ ನಿಟ್ಟಿನಲ್ಲಿ ಪೋಷಕರ ಮನಸ್ಥಿತಿ ಬದಲಾಗಬೇಕು ಎಂದರು.


ತಾವು ಗ್ರಾ.ಪಂ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಕೈಗೊಂಡ ಕ್ರಮಗಳ ಕುರಿತು ತಿಳಿಸಿದ ಅವರು, ಶಾಲಾ ಮಕ್ಕಳಿಗೆ ಜಿಲ್ಲೆಯಲ್ಲೇ ಮೊದಲ ಬಾರಿಗೆ ಆಟೋ ಸೌಲಭ್ಯ ಒದಗಿಸಿದ ಪಂಚಾಯಿತಿ ನಮ್ಮದಾಗಿತ್ತು ಎಂದರು.


ಸೂಲೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಕಾರ್ಯಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್‌ಸಿ ಅನಿಲ್ ಕುಮಾರ್ ಅವರು ಹೆಚ್ಚಿನ ಸಹಕಾರ ನೀಡಿದ್ದಾರೆ, ಅವರ ನೆರವಿನಿಂದಲೇ ಶಾಲೆಗಳ ಅಭಿವೃದ್ದಿಗೆ ಒತ್ತು ನೀಡಲು ಸಹಕಾರಿಯಾಯಿತು ಎಂದು ಸ್ಮರಿಸಿ ಧನ್ಯವಾದ ಸಲ್ಲಿಸಿದರು.


ಸೂಲೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸತೀಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾನ್ವೆಂಟ್ ಶಿಕ್ಷಣ ಒಂದು ಫ್ಯಾಷನ್ ಆಗಿಬಿಟ್ಟಿದೆ, ಪಕ್ಕದ ಮನೆಯ ಮಗು ಖಾಸಗಿ ಶಾಲೆಗೆ ಹೋಗುತ್ತಿದೆ ಎಂದರೆ ನಮ್ಮ ಮಗುವೂ ಅಲ್ಲಿಗೆ ಹೋಗಬೇಕು ಎಂಬ ಭಾವನೆ ಬೇರೂರಿದೆ ಎಂದು ವಿಷಾದಿಸಿದರು.


ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಗ್ರಾಮ ಪಂಚಾಯಿತಿಯಿಂದ ಸಿಗಬಹುದಾದ ಎಲ್ಲಾ ರೀತಿಯ ನೆರವು ಒದಗಿಸುವ ಭರವಸೆ ನೀಡಿದ ಅವರು, ಸರ್ಕಾರಿ ಶಾಲೆಗಳ ಮಕ್ಕಳಿಗೆ ನೆರವು ನೀಡಿ ಪ್ರೋತ್ಸಾಹಿಸುವ ಸುರೇಶ್ ಅವರ ಹೃದಯವಂತಿಗೆ ಉಳ್ಳವರಿಗೆಲ್ಲಾ ಇರದು ಎಂದು ಅಭಿಪ್ರಾಯಪಟ್ಟು, ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ಜೀವನ ಹಾಗೂ ಉದ್ಯೋಗದ ದೃಷ್ಟಿಯಿಂದ ಕನ್ನಡದೊಂದಿಗೆ ಇಂಗ್ಲೀಷ್ ಕಲಿಕೆಗೆ ಹೆಚ್ಚಿನ ಒತ್ತು ನೀಡುವಂತೆ ಸಲಹೆ ನೀಡಿದ ಅವರು, ಗ್ರಾಮ ಪಂಚಾಯತಿಯಿಂದ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ ಎಂದರು.


ಮುಖ್ಯಶಿಕ್ಷಕಿ ಸುಧಾ ಸ್ವಾಗತಿಸಿ, ನಮ್ಮ ಶಾಲೆಗೆ ಸುರೇಶ್ ಹಾಗೂ ಗ್ರಾಮ ಪಂಚಾಯಿತಿಯಿಂದ ಹೆಚ್ಚಿನ ನೆರವು ಲಭಿಸಿದೆ, ಮತ್ತಷ್ಟು ಸೌಲಭ್ಯಗಳು ಹರಿದು ಬರಲಿ ಎಂದು ಆಶಿಸಿ, ಈ ನಿಟ್ಟಿನಲ್ಲಿ ಪಿಡಿಒ ಅವರು ಇತ್ತೀಚೆಗೆ ಶಾಲೆಗೆ ಕುಡಿಯುವ ನೀರಿನ ಸಮಸ್ಯೆ ಹೇಳಿದ ಕೂಡಲೇ ಪಂಪ್ ಮೋಟಾರ್ ಒದಗಿಸಿಕೊಟ್ಟಿದ್ದರ ಕುರಿತು ಧನ್ಯವಾದ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ಶಿಕ್ಷಕಿ ಪುಷ್ಪಲತಾ ನಿರೂಪಿಸಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಶೋಕ್, ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರಶೆಟ್ಟಿ, ಮುಖಂಡರಾದ ಸೂಲೂರಿನ ಶ್ರೀನಿವಾಸ್, ರಮೇಶ್‌ಗೌಡ, ಪೆಮ್ಮಶೆಟ್ಟಿಹಳ್ಳಿಯ ಟೈಲರ್ ಮಂಜುನಾಥ್,ದೇವರಾಜ್, ಮತ್ತಿತರರು ಉಪಸ್ಥಿತರಿದ್ದರು.