
ಬೆಂಗಳೂರು, ಏ.24- ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಒಳ ಮೀಸಲಾತಿ ಕುರಿತಂತೆ ದಲಿತ ಎಡಗೈಗೆ ಶೇ. 5.25, ದಲಿತ ಬಲಗೈಗೆ ಶೇ 5.25 ಹಾಗೂ ಸ್ಪೃಶ್ಯರಿಗೆ ಶೇ. 4.5 ಮೀಸಲಾತಿ ಸೇರಿದಂತೆ ಒಟ್ಟು ಶೇ.15 ರಷ್ಟು ಮೀಸಲಾತಿ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ಯಲ್ಲಿಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಿದ್ದರಾಮಯ್ಯ, ಬಹಳ ವರ್ಷದಿಂದ ಒಳ ಮೀಸಲಾತಿ ಕುರಿತು ಹೋರಾಟ ನಡೆಯುತ್ತಾ ಬಂದಿದೆ.ಈ ಹೋರಾಟಕ್ಕೆ ಈಗ ಪರಿಹಾರ ಒದಗಿಸಿದ್ದೇವೆ ಎಂದರು.
ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಪರಿಶಿಷ್ಟ ಜಾತಿ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ಒಳ ಮೀಸಲಾತಿಗೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿತ್ತು. ಪಕ್ಷದ ಪ್ರಣಾಳಿಕೆಯಲ್ಲೂ ಒಳಮೀಸಲಾತಿ ಭರವಸೆ ನೀಡಲಾಗಿತ್ತು.2024 ರಲ್ಲಿ ಒಳಮೀಸಲಾತಿ ಕೊಡಬಹುದು ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿತ್ತು ಎಂದು ಹೇಳಿದರು.
ತೀರ್ಪು ಬಂದ ಬಳಿಕ ನ್ಯಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿದ್ದೆವು. ನಾಗಮೋಹನ್ ದಾಸ್ ಆಯೋಗದ ವರದಿಗೆ ಒಪ್ಪಿಗೆ ನೀಡಲಾಗಿತ್ತು. ಈ ವರದಿಯಲ್ಲಿ 6,5,4,1,1 ಒಳ ಮೀಸಲು ಕೊಡಲಾಗಿತ್ತು. ಬಳಿಕ ಸಂಪುಟ ಸಭೆಯಲ್ಲಿ ಎಎಗೈಗೆ 6, ಬಲಗೈಗೆ 6 ಹಾಗೂ ಅಲೆಮಾರಿಗೆ ಶೇ. 5 ಮೀಸಲಾತಿ ನೀಡಲು ನಿರ್ಧರಿಸಲಾಗಿತ್ತು ಎಂದರು.
ಈ ನಿರ್ಧಾರದ ನಂತರ ಕಾನೂನು ಜಾರಿಗೆ ತರಲಾಗಿತ್ತು. ಆದರೆ ರೋಸ್ಟರ್ ಗೊಂದಲ ಆರಂಭವಾಯಿತು. ಅಲೆಮಾರಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ ಶೇ.50 ರಷ್ಟು ಮೀಸಲಾತಿ ಇರಬಾರದು ಎಂದು ಹೇಳಿದ್ದರು. ನಂತರ ನಾಗಮೋಹನ್ ದಾಸ್ ಎಸ್‌ಸಿ, ಎಸ್‌ಟಿಗೆ 24% ಅಂತ ಹೇಳಿದ್ದರು. ಅದರಲ್ಲಿ ಎಸ್‌ಟಿಗೆ 7%, ಎಸ್‌ಸಿಗೆ 17% ಶಿಫಾರಸು ಮಾಡಿದ್ದರು ಎಂದು ತಿಳಿಸಿದರು.
6,6,5 ಎಸ್‌ಸಿಗೆ 17% ಕಾನೂನು ಮಾಡಿದ್ದೆವು. ಅದಾದ ಮೇಲೆ ಕೋರ್ಟಿಗೆ ಹೋಗಿದ್ದು. ರೋಸ್ಟರ್ ಪಾಯಿಂಟ್ ಸರಿ ಇಲ್ಲ ಎಂದು ಎಡಗೈ, ಬಲಗೈ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆ ಸಂದರ್ಭದಲ್ಲಿ ಹೈಕೋರ್ಟ್ ತಡೆ ನೀಡಿ,ಒಟ್ಟಾರೆ ಮೀಸಲಾತಿ ಪ್ರಮಾಣ 50% ಗಿಂತ ಮೀರಬಾರದು ಅಂತ ತೀರ್ಪು ಹೊರಬಿತ್ತು.
ಈ ಹಿಂದೆ ಇಂದಿರಾ ಸಹಾನಿ ಕೇಸ್‌ನಲ್ಲೂ ಇದೇ ತೀರ್ಪು ಬಂದಿತ್ತು. ಶೇ 56ರಷ್ಟು ಮೀಸಲಾತಿ ಕೊಟ್ಟಿದ್ದು ಸರಿಯಲ್ಲ ಎಂದು ಕೋರ್ಟ್ ಹೇಳಿತ್ತು. ಹಾಗಾಗಿ, ದಲಿತರಿಗೆ 17% ಬದಲು 15% ಗೆ ಒಳಮೀಸಲಾತಿ ಕೊಡಬೇಕಾಯ್ತು. ನಂತರ ರೋಸ್ಟರ್ ಸರಿಯಿಲ್ಲ ಅಂತ ಮತ್ತೆ ಹೋರಾಟಗಳು ನಡೆದವು.
ಕಳೆದ ತಿಂಗಳು ವಿಶೇಷ ಸಚಿವ ಸಂಪುಟ ಮಾಡಕ್ಕಾಗಲಿಲ್ಲ, ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಇಂದು ಸಂಪುಟ ಸಭೆ ಸೇರಿ ಒಳಮೀಸಲಾತಿ ಹಂಚಿಕೆ ಕುರಿತ ಗೊಂದಲ ಬಗೆಹರಿಸಿದ್ದೇವೆ ಎಂದು ಅವರು ತಿಳಿಸಿದರು.
ನ್ಯಾಯಾಲಯದ ಮುಂದಿನ ಆದೇಶದವರೆಗೆ ಇದೇ ಅನುಪಾತ ಅನ್ವಯವಾಗಲಿದ್ದು, ನೇಮಕಾತಿ ವೇಳೆ ಪ್ರವರ್ಗ ಎ-5.25, ಬಿ-5.25, ಸಿ-4.5 ಮೀಸಲಾತಿಯೊಂದಿಗೆ ಅಧಿಸೂಚನೆಯನ್ನು ಮತ್ತೊಮ್ಮೆ ಪ್ರಕಟ ಮಾಡುತ್ತೇವೆ. ಬಜೆಟ್ನಲ್ಲಿ 56,432 ಹುದ್ದೆಗಳ ಭರ್ತಿ ಮಾಡುವುದಾಗಿ ಘೋಷಿಸಿದ್ದೇವೆ. ಈ 56,432 ಹುದ್ದೆಗಳ ಭರ್ತಿ ವೇಳೆ ಇದೇ ಮೀಸಲಾತಿ ಅನುಪಾತ ಅನ್ವಯವಾಗಲಿದೆ. ವಿಶೇಷ ಸಂಪುಟ ಸಭೆಯಲ್ಲಿ ನಿರ್ಧರಿಸಿದ ಅನುಪಾತ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

























