
ಬೆಂಗಳೂರು, ಏ. ೨೪- ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‌ನಲ್ಲೂ ಬಣ ರಾಜಕೀಯ, ಡಿನ್ನರ್ ಮೀಟಿಂಗ್, ದೆಹಲಿ ಯಾತ್ರೆ ಮತ್ತೆ ಮುನ್ನಲೆಗೆ ಬಂದಿದ್ದು, ಪಂಚರಾಜ್ಯಗಳ ಹಾಗೂ ರಾಜ್ಯದ ಉಪಚುನಾವಣೆಯ ಫಲಿತಾಂಶಗಳ ನಂತರ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮತ್ತಷ್ಟು ಬಿರುಸಾಗುವ ಸಾಧ್ಯತೆ ಇದೆ.
ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ಪುನಾರಚನೆ ಈ ಎಲ್ಲಾ ವಿಚಾರಗಳು ಈಗ ಕಾಂಗ್ರೆಸ್‌ನಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳಿಗೆ ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ತಮ್ಮ ಆಪ್ತ ಸಚಿವರ ಜತೆ ಡಿನ್ನರ್ ಮೀಟಿಂಗ್ ನಡೆಸಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿರುವುದು ಕಾಂಗ್ರೆಸ್‌ನಲ್ಲಿ ಮುಂದೆ ರಾಜಕೀಯ ಕ್ರಾಂತಿಯನ್ನು ಸಂಕೇತಿಸಿವೆ.
ರಾಜ್ಯದಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್‌ನ ೨೦ಕ್ಕೂ ಹೆಚ್ಚು ಹಿರಿಯ ಶಾಸಕರು ದೆಹಲಿ ಯಾತ್ರೆ ನಡೆಸಿ ದೆಹಲಿಯಲ್ಲೆ ಐದಾರು ದಿನ ಮೊಕ್ಕಾಂ ಹೂಡಿ ವರಿಷ್ಠರ ಮುಂದೆ ಸಂಪುಟ ಪುನಾರಚನೆಯ ಬೇಡಿಕೆ ಮಂಡಿಸಿದ್ದರು.
ಹಿರಿಯ ಶಾಸಕರ ಈ ಬೇಡಿಕೆಗೆ ಡಿಕೆಶಿ ಬಣದ ಶಾಸಕರಿಂದ ಅಸಮಾಧಾನ ವ್ಯಕ್ತವಾಗಿ ನಾಯಕತ್ವ ಬದಲಾವಣೆ ವಿಚಾರ ಇತ್ಯರ್ಥವಾಗದೆ ಸಂಪುಟ ಪುನಾರಚನೆ ತೀರ್ಮಾನ ಬೇಡ ಎಂದು ವರಿಷ್ಠರ ಮೇಲೆ ಒತ್ತಡ ಹೇರಲಾಗಿತ್ತು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಖುದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬರುವಂತೆ ಮನವಿ ಮಾಡಿದ್ದರು.
ಇದಾದ ಬಳಿಕ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಬಿರುಸು ಪಡೆದಿದ್ದು, ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನ ಅಲಿಆಸ್ಕರ್ ರಸ್ತೆಯಲ್ಲಿರುವ ಸಚಿವ ಬೈರತಿ ಸುರೇಶ್ ರವರ ನಿವಾಸದಲ್ಲಿ ತಮ್ಮ ಆಪ್ತ ಸಚಿವರುಗಳ ಜತೆ ಡಿನ್ನರ್ ಮೀಟಿಂಗ್ ನಡೆಸಿ ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷಗಿರಿ, ಡಿ.ಕೆ. ಶಿವಕುಮಾರ್ ರವರ ದೆಹಲಿ ಯಾತ್ರೆ ಎಲ್ಲದರ ಬಗ್ಗೆಯೂ ಸುಮಾರು ಹೊತ್ತು ಚರ್ಚೆ ನಡೆಸಿದ್ದರು.
ಸಚಿವರುಗಳಾದ ಡಾ. ಜಿ. ಪರಮೇಶ್ವರ್, ಬೈರತಿ ಸುರೇಶ್, ಜಮೀರ್ ಅಹಮದ್ ಖಾನ್, ಡಾ. ಹೆಚ್.ಸಿ. ಮಹದೇವಪ್ಪ ಇವರುಗಳು ಈ ಡಿನ್ನರ್ ಮೀಟಿಂಗ್‌ನಲ್ಲಿ ಭಾಗಿಯಾಗಿ ಮುಖ್ಯಮಂತ್ರಿಗಳ ಜತೆ ಮುಂದಿನ ರಾಜಕೀಯ ಆಗು ಹೋಗುಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದರು.
ದೆಹಲಿಯಲ್ಲಿ ಡಿಕೆಶಿ ಮೊಕ್ಕಾಂ
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರ ಜತೆ ಡಿನ್ನರ್ ಮೀಟಿಂಗ್ ನಡೆಸಿದ್ದ ಹೊತ್ತಿನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಮೊಕ್ಕಾಂ ಹೂಡಿ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಈಡೇರಿಕೆಗೆ ಪಟ್ಟು ಹಾಕಿದ್ದಾರೆ.
ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ನಿನ್ನೆ ರಾತ್ರಿಯೇ ದೆಹಲಿಗೆ ತೆರಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವರಿಷ್ಠರನ್ನು ಭೇಟಿ ಮಾಡಿ ನಾಯಕತ್ವ ವಿಚಾರ ಇತ್ಯರ್ಥಕ್ಕೆ ಪಟ್ಟು ಹಾಕಿದ್ದಾರೆ.
ಇಂದು ಸಹ ದೆಹಲಿಯಲ್ಲೇ ಉಳಿದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ನಡೆದಿರುವ ವಿದ್ಯಮಾನಗಳು ಮುಂದೆ ಕಾಂಗ್ರೆಸ್‌ನಲ್ಲಿ ರಾಜಕೀಯ ಕ್ರಾಂತಿಗೆ ಮುನ್ನುಡಿ ಎಂದು ಹೇಳಲಾಗುತ್ತಿದ್ದು, ಮೇ ೪ರ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಚಟುವಟಿಕೆಗಳು ಬಿರುಸಾಗುವ ಸಾಧ್ಯತೆಗಳಿದ್ದು, ಮೇ ಮೊದಲನೇ ಮತ್ತು ಎರಡನೇ ವಾರದಲ್ಲಿ ವರಿಷ್ಠರು ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗೆ ಸಂಬಂಧಿಸಿದಂತೆ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯುವ ಸಂಬಂಧ ಒಂದು ನಿರ್ಧಾರ ಪ್ರಕಟಿಸುವ ಸಾಧ್ಯತೆಗಳು ಹೆಚ್ಚಿವೆ.

























